ಶಿವಮೊಗ್ಗ , ಫೆಬ್ರವರಿ,24,2026(www.kannadapost.com): ನಗರದ ಹೊರವಲಯದ ಸೂಳೆಬೈಲು ಬಡಾವಣೆಯಲ್ಲಿ ನಡೆದ ಬಾಲಕನ ಹಲ್ಲೆ ಮತ್ತು ಸಾವಿನ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಎಸ್‌ಎಸ್‌ಎಲ್‌ಸಿ ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಸ್ನೇಹಿತನನ್ನು ರಕ್ಷಿಸಲು ಮುಂದಾದ ಸಂಕೇತ್ ಪ್ರಾಣ ಕಳೆದುಕೊಂಡಿರುವುದು ಪ್ರಕರಣಕ್ಕೆ ಮನಕಲಕುವ ತಿರುವು ನೀಡಿದೆ.
ಹೇಗೆ ನಡೆದಿದೆ ಘಟನೆ?
ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ವಿಶೇಷ ತರಗತಿ ಮುಗಿಸಿಕೊಂಡು ಸೋಮವಾರ ಸಂಜೆ ಸಂಕೇತ್ ಮತ್ತು ಗಿರೀಶ್ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅದೇ ಬಡಾವಣೆಯ ಕೆಲ ಬಾಲಕರು ಗಿರೀಶ್ ಜೊತೆ ಕಿರಿಕ್ ಮಾಡಿಕೊಂಡಿದ್ದು, ಮಾತಿನ ಚಕಮಕಿ ತಕ್ಷಣವೇ ಗಲಾಟೆಗೆ ತಿರುಗಿದೆ ಎನ್ನಲಾಗಿದೆ.
ಗಿರೀಶ್ ಮೇಲೆ ಏಕಾಏಕಿ ಹಲ್ಲೆ ಆರಂಭವಾಗುತ್ತಿದ್ದಂತೆಯೇ ಸಂಕೇತ್ ಸ್ನೇಹಿತನನ್ನು ರಕ್ಷಿಸಲು ಮಧ್ಯೆ ಪ್ರವೇಶಿಸಿದ್ದಾನೆ. ಆದರೆ ಹಲ್ಲೆಗಾರರು ಗಿರೀಶ್‌ನನ್ನು ಬಿಟ್ಟು ಸಂಕೇತ್ ಮೇಲೆಯೇ ತಿರುಗಿಬಿದ್ದು ಎದೆ, ಮುಖ ಹಾಗೂ ಹೊಟ್ಟೆ ಭಾಗಗಳಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಹಲ್ಲೆಯಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಕ್ರಮ
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ತುಂಗಾ ನಗರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ಹಲ್ಲೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಟ್ಟೆಚ್ಚರ: ನಗರಾದ್ಯಂತ ಬಿಗಿ ಬಂದೋಬಸ್ತ್
ಈ ಘಟನೆ ಬಳಿಕ ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ನಗರಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಶಾಸಕ ಭೇಟಿ
ಇದೇ ವೇಳೆ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಿರೀಶ್ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಸಂಕೇತ್ ಸಾವಿನ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರಲ್ಲಿ ಆತಂಕ
ಸ್ನೇಹಿತನನ್ನು ರಕ್ಷಿಸಲು ಧಾವಿಸಿದ ಸಂಕೇತ್ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಬಾಲಕರ ನಡುವಿನ ಸಣ್ಣ ಗಲಾಟೆ ದುರಂತ ಅಂತ್ಯ ಕಂಡಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.










