ಚನ್ನರಾಯಪಟ್ಟಣ: ಹಿರಿಯ ರೈತರು ನಮ್ಮ ದೇಶದ ತಳಿಗಳನ್ನು ಉಳಿಸುವ ಮಾರ್ಗದರ್ಶನವನ್ನು ಇಂದಿನ ಯುವಕರಿಗೆ ನೀಡಬೇಕು. ಹಸುಗಳನ್ನು ಸಾಕವುದನ್ನು ತಮ್ಮ ಮಕ್ಕಳಿಗೆ ಕಲಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋರೆಕಾಯಿಪುರ ಗ್ರಾಮದಲ್ಲಿ ಹೋರಿ ಹಬ್ಬದ ಪ್ರಯುಕ್ತ ಗ್ರಾಮದೇವತೆ ಶ್ರೀ ಮಲ್ಲಿಗಮ್ಮ ದೇವಸ್ಥಾನದ ಬಳಿ ರೈತರಿಗೆ ಮಲೆನಾಡು ಗಿಡ್ಡ ತಳಿಯ ಹೋರಿಗಳ ಉಚಿತ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಾನವ ಆರೋಗ್ಯವಾಗಿ ಇರಬೇಕಾದರೆ, ಉತ್ತಮವಾದ ಆಹಾರ ಬೇಕು. ದೇಶಿಯ ತಳಿಯ ಹಾಲಿನಲ್ಲಿ ರೋಗಗಳನ್ನು ತಡೆಗಟ್ಟವು ಮತ್ತು ರುಚಿಕರ, ಪೌಷ್ಟಿಕಯುಕ್ತ ಹಾಲು, ದೇಶಿ ತಳಿಯಿಂದ ಹಾಲು ಉತ್ಪಾದನೆ ಕಡಿಮೆ ಇದ್ದರೂ, ಆರೋಗ್ಯಕರವಾದ ಗುಣಮಟ್ಟದ ಹಾಲು ದೊರೆಯುತ್ತದೆ ಇದನ್ನು ನಮ್ಮ ಪೂರ್ವಿಕರು ಅರಿತಿದ್ದರು ಆದರೆ ನಾವು ಅದನ್ನು ಮರೆಯುತ್ತಿದ್ದೇವೆ ಎಂದರು.
ರೈತರ ಮನೆಯಲ್ಲಿ ಹೆಚ್ಚು ಗೋವುಗಳು ಇದ್ದರೆ, ಆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಪವಿತ್ರವಾಗಿರುತ್ತದೆ.
ಸಮಾಜದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದೆ, ಇಂದು ದೇವಸ್ಥಾನ ಮತ್ತು ಶಾಲೆಗಳು ಸೇರಿದಂತೆ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಆಳವಡಿಸಿ, ಎಲ್ಲರನ್ನು ಅಪನಂಬಿಕೆಯಿಂದ ನೋಡುತ್ತಿವೆ. ಎಲ್ಲರು ಶ್ರೀಮಂತರ ಆಗಬೇಕು ಎಂಬ ದಾವಂತದಲ್ಲಿ ಇದ್ದೆವೆ, ಇದು ನಮ್ಮ ಸಂಸ್ಕೃತಿ ಅಲ್ಲ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಕಸಾಯಿಖಾನೆ ನೀಡುವ ಸಂಸ್ಕೃತಿಯನ್ನು ರೈತರು ನಿಲ್ಲಿಸಬೇಕು. ಸರ್ಕಾರ ಪ್ರತಿ ತಾಲ್ಲೂಕಿನ ಒಂದು ಗೋವು ಸೇವಾ ಕೇಂದ್ರವನ್ನು ತೆರೆದು, ಪಶು ಆಹಾರ ಮತ್ತು ವೈದ್ಯರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸದಾಗ, ದೇಶಿಯ ತಳಿಗಳನ್ನು ಉಳಿಸಲು ಸಾಧ್ಯ ಎಂದರು.
ಮಲೆನಾಡು ಗಿಡ್ಡ ತಳಿ ಮತ್ತು ಹಾಸನ ಗೂಳಿ ಸಂರಕ್ಷಕ ಶರತ್ ಗೌಡ ನೇತೃತ್ವದಲ್ಲಿ 20 ಜೊತೆ ಮಲೆನಾಡು ಗಿಡ್ಡ ಹೋರಿಗಳನ್ನು ಸಂಸ್ಥೆಯಲ್ಲಿ ನೊಂದಾಯಿಸಿಕೊಂಡಿದ್ದ ರೈತರಿಗೆ ಸಂಸ್ಥೆಯ ನಿಯಮದಂತೆ ಉಚಿತವಾಗಿ ನೀಡಲಾಯಿತು.
ರಾಷ್ಟ್ರೀಯ ಗೋ ಸೇವಾಸಂಸ್ಥಾನದ ಅಧ್ಯಕ್ಷ ಭಕ್ತಿ ಭೂಷಣ್ ದಾಸ್, ದೇಶಿಯ ತಳಿಯ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಮುಖಂಡರಾದ ಬಸವರಾಜು ಬಿರಾದರ್, ವಿವೇಕ್ ಬ್ರಹ್ಮೂರು, ಅಕ್ಷಯ್ ಆಳ್ವ, ಬೇಕರಿ ತೇಜಮೂರ್ತಿ, ಆಯರಹಳ್ಳಿ ಪ್ರಭಾಕರ್, ಕರವೇ ಶಿವರಾಜು ಮತ್ತಿತರರು ವೇದಿಕೆಯಲ್ಲಿದ್ದರು.










