ಸಕಲೇಶಪುರ : ಪಟ್ಟಣದ ತೇಜಸ್ವಿ ವೃತ್ತದ ಸಮೀಪದ ಖಾಸಗಿ ಶಾಲೆಯ ಆಟದ ಮೈದಾನದಲ್ಲಿ ಯುವಕನೊಬ್ಬನು ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಮಠಸಾಗರ ಗ್ರಾಮದ ಶಿವಣ್ಣ ಎಂಬವರ ಪುತ್ರ ಜೀವನ್ (30) ಎಂದು ಗುರುತಿಸಲಾಗಿದೆ.
ಸ್ಥಳೀಯರು ಆಟದ ಮೈದಾನದಲ್ಲಿ ಜೀವನ್ ಶವ ಬಿದ್ದಿರುವುದನ್ನು ಗಮನಿಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸೋಕೋ ತಂಡವೂ ಸ್ಥಳಕ್ಕೆ ಆಗಮಿಸಿ ಮಹಜರು ಕಾರ್ಯಾಚರಣೆ ನಡೆಸಿತು.
ಮೃತ ಯುವಕನ ಬೈಕ್ ಹೇಮಗಂಗಾ ಸರ್ವಿಸ್ ಸ್ಟೇಷನ್ ಬಳಿ ನಿಂತಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯು ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.










