ಸಕಲೇಶಪುರ: ಅಸ್ಸಾಂ ಮೂಲದ ಕೂಲಿ ಕಾರ್ಮಿಕರಿಗೆ ಪೊಲೀಸರ ಕಾನೂನು ಅರಿವು- ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬೇಡಿ, ಸಮಸ್ಯೆ ಕಂಡು ಬಂದರೆ ಪೊಲೀಸ್ ಸಂಪರ್ಕಿಸಿ

ಸಕಲೇಶಪುರ: ತಾಲ್ಲೂಕಿನ ವಿವಿಧ ಕಾಫಿ ತೋಟಗಳು, ಫ್ಯಾಕ್ಟರಿಗಳು, ಇಟ್ಟಿಗೆಗೂಡುಗಳು ಹಾಗೂ ರಸ್ತೆ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ಲೈನ್ ಮನೆಗಳಲ್ಲಿ ವಾಸವಿರುವ ಅಸ್ಸಾಂ ಮೂಲದ ಕೂಲಿ ಕಾರ್ಮಿಕರಿಗೆ ಸಕಲೇಶಪುರ ನಗರ ಪೊಲೀಸ್ ಠಾಣೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಮಿಕರನ್ನು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆಸಿ, ಅವರ ಹಕ್ಕುಗಳು, ಕರ್ತವ್ಯಗಳು, ಸಾರ್ವಜನಿಕ ಶಾಂತಿ, ಕಾನೂನು ಪಾಲನೆಯ ಮಹತ್ವ, ಯಾವುದೇ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವ ವಿಧಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀ ಮಹೇಶ್ ಹಾಗೂ ಸಕಲೇಶಪುರ ಗ್ರಾಮಾಂತರ ವೃತ್ತ ನಿರೀಕ್ಷಕ (ಸರ್ಕಲ್ ಇನ್ಸ್‌ಪೆಕ್ಟರ್) ಬಿ.ಕೆ. ಪಾಟೀಲ್ ಅವರು ಉಪಸ್ಥಿತರಿದ್ದು, ಕಾರ್ಮಿಕರಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

ಕಾರ್ಮಿಕರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಸಿದ ಅಧಿಕಾರಿಗಳು ನಿಮಗೆ ಯಾವುದೇ ರೀತಿಯ ತೊಂದರೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.