ಚನ್ನರಾಯಪಟ್ಟಣ: ರಾಜ್ಯಾದ್ಯಂತ ವಾಲಿಬಾಲ್ ಪಂದ್ಯಾವಳಿ ಆಯೋಜನೆ: ರಾಮಕೃಷ್ಣೇಗೌಡ

Ramakrishne Gowda, a senior volleyball player of the association, said that by organizing volleyball tournaments at all district and taluk levels in the state, the best players will be identified and provided with good training by the State Volleyball Association.

ಚನ್ನರಾಯಪಟ್ಟಣ: ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡುವ ಮೂಲಕ ಉತ್ತಮ ಆಟಗಾರರನ್ನು ಗುರುತಿಸಿ, ರಾಜ್ಯ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಉತ್ತಮ ತರಬೇತಿ ನೀಡಲಾಗುವುದು ಎಂದು ಅಸೋಸಿಯೇಷನ್ ಹಿರಿಯ ವಾಲಿಬಾಲ್ ಆಟಗಾರ ರಾಮಕೃಷ್ಣೇಗೌಡ ಹೇಳಿದರು.

ತಾಲ್ಲೂಕಿನ ಹಿರೀಸಾವೆಯಲ್ಲಿ ಹಾಸನ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸುವ ಬಗ್ಗೆ ನಡೆದ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.
ವಾಲಿಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿದ ಆಟಗಾರರಿಗೂ ಇತರೆ ಕ್ರೀಡೆಗಳ ಕ್ರೀಡಾಪಟುಗಳಿಗೆ ಇರುವ ಗೌರವ ಮತ್ತು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಇದನ್ನು ಯುವ ಆಟಗಾರರಿಗೆ ತಿಳಿಸಬೇಕು ಎಂದರು.

ಜೂನಿಯರ್, ಸಬ್ ಜುನಿಯರ್, ಸೀನಿಯರ್ ಸೇರಿದಂತೆ ಹಲವು ಹಂತ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುವುದು. ಇದರಿಂದ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ರಾಜ್ಯ ಮಟ್ಟದಲ್ಲಿ ಉತ್ತಮ ತರಬೇತಿ ನೀಡಿ, ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆ ಮಾಡುವಾಗ ಅನುಸರಿಸುವ ಕ್ರಮಗಳನ್ನು ತಿಳಿಸಲಾಗುವುದು ಎಂದು ತಿಳಿಸಿದರು.

ಹಾಸನ ಜಿಲ್ಲೆಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಜೆ. ಪರಮೇಶ್ ಮಾತನಾಡಿ, ಹಿಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಆಟಗಾರರನ್ನು ಪಂದ್ಯಾವಳಿ ಸಮಯದಲ್ಲಿ ಆಹ್ವಾನಿಸಿ, ಅವರಿಂದ ತರಬೇತಿ ಮತ್ತು ಮಾರ್ಗದರ್ಶನವನ್ನು ಯುವ ಆಟಗಾರರಿಗೆ ಕೊಡಿಸಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳು, ಎಲ್ಲಾ ಸಂಘ ಸಂಸ್ಥೆಯವರು ಪಂದ್ಯಾವಳಿ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.

ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಆರ್. ಹರ್ಷ್, ಕಾರ್ಯದರ್ಶಿ ಎಲ್.ಪಿ. ಆಂಟೋನಿ, ಜಿಲ್ಲಾ ಕಾರ್ಯದರ್ಶಿ ಟಿ. ಅರುಣ್ ಕುಮಾರ್ ಸೇರಿದಂತೆ ಹಿರೀಸಾವೆ ಹೋಬಳಿಯ ವಾಲಿಬಾಲ್ ಆಟಗಾರರು ಸಭೆಯಲ್ಲಿ ಇದ್ದರು.