ಹಾಸನ: ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟಲು ಎಚ್‌ವಿಪಿ ಲಸಿಕೆಯನ್ನು ರಾಜ್ಯದ ಹೆಣ್ಣು ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡಬೇಕು ಎಂದು ರಾಧಮ್ಮ ಜನಸ್ಪಂದನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅತಿ ಹೆಚ್ಚಾಗಿ ಬಲಿ ಪಡೆಯುತ್ತಿರುವ ಕಾಯಿಲೆ ಎಂದರೆ ಕ್ಯಾನ್ಸರ್, 7 ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ. ಇದರ ಭಾಗವಾದ ಗರ್ಭಕೊರಳ ಕ್ಯಾನ್ಸರನ್ನು ವ್ಯಾಕ್ಸಿನೇಷನ್ ಹಾಕಿಸುವ ಮೂಲಕ ತಡೆಗಟ್ಟಬಹುದಾಗಿದೆ ಎಂದರು.
9-15 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಈ ವ್ಯಾಕ್ಸಿನೇಷನ್ ಹಾಕಿರುವುದರಿಂದ ಕ್ಯಾನ್ಸರ್ ಜೊತೆಗೆ ಸಾವನ್ನೂ ತಡೆಯಬಹುದು ಎಂದು ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಸಿಕ್ಕಿಂ ರಾಜ್ಯದ ಸಿಎಂ ಪ್ರೇಮ್ ಸಿಂಗ್ ತಮಂಗ್ 2026 ಏಪ್ರಿಲ್‌ನಿಂದ ಬಾಲಕಿಯರಿಗೆ ಉಚಿತ ಎಚ್‌ಪಿವಿ ಲಸಿಕೆಯನ್ನು ಸರ್ಕಾರದಿಂದಲೇ ಹಾಕಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದೇ ರೀತಿ ನಮ್ಮ ಸರ್ಕಾರವೂ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ನಾಳೆ ಮುಖ್ಯಮಂತ್ರಿ ಹಾಗೂ ಡಿಸಿಎಂ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ಹೆಣ್ಣು ಮಕ್ಕಳ ಜೀವ ಉಳಿಸುವ ನಿಟ್ಟಿನಲ್ಲಿ ಉಚಿತ ಲಸಿಕೆ ಯೋಜನೆ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂಬಂಧ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದರು. ಮಾಜಿ ಶಾಸಕ ಅರಕಲಗೂಡಿನ ಎ.ಟಿ.ರಾಮಸ್ವಾಮಿ ಅವರು ಈಗಾಗಲೇ 300 ಮಕ್ಕಳಿಗೆ ಲಸಿಕೆ ಹಾಕಿಸಿದ್ದಾರೆ. ಅದೇ ಮಾದರಿಯನ್ನು ಆಲೂರು ತಾಲೂಕಿನಲ್ಲೂ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸಾಗರ್, ಸೋಮಶೇಖರ್ ಇದ್ದರು.










