ಸಕಲೇಶಪುರ: ತನ್ನ ಸೇವಾ ಚಟುವಟಿಕೆಯ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ನೂರುವರ್ಷಗಳನ್ನು ಪೊರೈಸಿದೆ ಎಂದು ಭಾರತೀಯ ಸಾಹಿತ್ಯ ಪರಿಷದ್ನ ತಾಲೂಕು ಅಧ್ಯಕ್ಷ ಡಾ. ಆರ್. ಅಣ್ಣಪ್ಪಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ಧಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನೂರು ವರ್ಷಗಳ ಹಿಂದೆ ಹಿಂದೂ ಧರ್ಮಕ್ಕಿರುವ ಅಪಾಯಗಳನ್ನು ಗುರುತಿಸಿ ಅಂದಿನ ಮಹತ್ಮರು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗಮಾಡಿ ಧರ್ಮ ರಕ್ಷಣೆಗಾಗಿ ಸಂಘವನ್ನು ಹುಟ್ಟುಹಾಕಿದ ಪರಿಣಾಮ ನೂರು ವರ್ಷಗಳ ಅವಧಿಯಲ್ಲಿ ಹಿಂದೂ ಧರ್ಮದ ವಿರುದ್ಧ ನಡೆದ ಹಲವು ಷಡ್ಯಂತ್ರಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.
ಸಂಘದ ಪ್ರತಿ ಶಾಖೆಗಳಲ್ಲೂ ಸ್ವಯಂ ಸೇವಕರಿಗೆ ದೇಶಭಕ್ತಿಯೊಂದಿಗೆ ದೈಹಿಕ ಚಟುವಟಿಕೆ ತರಬೇತಿ ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ.
ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಮಹಿಳೆಯರು ನಿರ್ವಹಿಸುವ ಐದು ಸಾವಿರ ಶಾಖೆಗಳಿದ್ದು ಹಿಂದೆ ಎಂದಿಗಿಂತಲೂ ಸಮರ್ಥವಾಗಿ ಸಂಘ ಕೆಲಸ ಮಾಡುತ್ತಿದೆ.
ಸಂಘಕ್ಕೆ ವೃದ್ದಾಪ್ಯವಿಲ್ಲ, ಪ್ರತಿ ಶಾಖೆಯಲ್ಲೂ ನವ ಚೈತನ್ಯ ಪಡೆದುಕೊಳ್ಳುತ್ತಿದೆ. ಸಂಘ ಸಮಾಜದ ಆಂತರ್ಯದಲ್ಲಿ ಕೆಲಸ ಮಾಡುತ್ತಿದ್ದು ದೇಶಕಟ್ಟುವ ಬಗ್ಗೆ ಸಂಘ ತನ್ನದೆ ಕಾರ್ಯಸೂಚಿಯನ್ನು ಹೊಂದಿದೆ ಎಂದರು.
ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸಂಘ ಅತ್ಯಂತ ಬಲಿಷ್ಠ ಹಾಗೂ ಬೃಹತ್ ಸಂಘವಾಗಿದ್ದು ತಮ್ಮ ಸಂಘದ ನಿರ್ಧಾರಗಳನ್ನು ಇಡಿ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಸಂಘದ ಬಲಿಷ್ಠತನಕ್ಕೆ ಸಾಕ್ಷಿಯಾಗಿದೆ.
ದೇಶ ಇಂದು ಸಾಕಷ್ಟು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ನಿಗ್ರಹಿಸುವ ಶಕ್ತಿಯನ್ನು ಸಂಘ ಹೊಂದಿದೆ. ಸಂಘ ಸಾಮರಸ್ಯ,ಸ್ವದೇಶಿವಸ್ತುಗಳ ಬಳಕೆ, ಪ್ರಕೃತಿ ಸಂರಕ್ಷಣೆ, ಸಮಾಜಸೇವೆ ಹಾಗೂ ನಾಗರಿಕ ಶಿಷ್ಟಚಾರದಂತಹ ಪಂಚಶೀಲತತ್ವದಡಿ ಕೆಲಸ ಮಾಡುತ್ತಿದೆ ಸಂಘ ನೂರು ವರ್ಷಗಳನ್ನು ಪೊರೈಸಿರುವುದು ದೇಶದ ನಾಗರಿಕರೆಲ್ಲ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಸದ್ಯ ದೇಶ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದ್ದು ಇವರಿಂದ ಮುಂದಿನದಿನಗಳಲ್ಲಿ ಹಿಂದೂ ಧರ್ಮಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ. ಸಂಘದ ಸ್ವಯಂ ಸೇವಕರ ನಡೆನುಡಿಯನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಆದ್ದರಿಂದ, ಸಂಘದ ಸ್ವಯಂ ಸೇವಕರು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು. ರಾಮಮಂದಿರ ನಿರ್ಮಾಣದ ವೇಳೆ ವಂತಿಕೆ ಸಂಗ್ರಹವನ್ನು ಸಂಘದ ಸ್ವಯಂ ಸೇವಕರಿಗೆ ನೀಡಿರುವುದು ಸ್ವಯಂ ಸೇವಕರ ನಿಷ್ಠೆಯನ್ನು ಸಾರುತ್ತಿದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಪ್ರವೀಣ್ ಓಸ್ವಾಲ್ ಭಾಗವಹಿಸಿದ್ದರು. ತಾಲೂಕು ಸಂಚಾಲಕ ನೂತನ್ ಕುಮಾರ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮುಂತಾದವರಿದ್ದರು.










