ನಮ್ಮ ಆಹಾರ ನಮ್ಮ ಆರೋಗ್ಯ

ಸಾರ್, ಆರು ತಿಂಗಳಾಯ್ತು ನನ್ನ ಎಡ ಕೈ ನೋವೇ ಕಡಿಮೆ ಆಗ್ತಾ ಇಲ್ಲಾ. ಎಡಕೈನ ಬೆರಳುಗಳು ಜುಮು ಜುಮು ಅನ್ತಿರ್ತಾವೆ. ಹೊರಗಡೆ ಇಂದ ಯಾವ್ದೇ ಗಾಯ ಇಲ್ಲ. ಊತ ಇಲ್ಲ. ಸುಮಾರು ಕಡೆ ತರ‍್ಸಿ ಸಾಕಾಗಿ ಹೋಗಿದೆ. ಕೆಲವೊಮ್ಮೆ ಬೆರಳುಗಳು ಉರಿತಾವೆ. ಹಸ್ತದಿಂದ ಮೇಲಕ್ಕೆ ಯಾವ್ದೇ ತೊಂದ್ರೆ ಇಲ್ಲಾ. ಜೀವನವೇ ಸಾಕಾಗಿ ಹೋಗಿದೆ ಎಂದು ಒಂದೇ ಸಮನೆ ಮಾತನಾಡುತ್ತಿದ್ದರು ರಂಗಮ್ಮ.

ಕೂಲಂಕಷವಾಗಿ ಪರೀಕ್ಷೆ ಮಾಡಿ ರಕ್ತದ ಮಾದರಿ ಪಡೆದು ಪರೀಕ್ಷಿಸಿ ನೋಡಿದಾಗ ಕಂಡು ಬಂದ ಅಂಶ ಎಂದರೆ, ರಂಗಮ್ಮನವರಿಗೆ ವಿಟಮಿನ್ ಬಿ ೧೨ ಕೊರತೆಯಿದೆ ಎಂದು. ಅರ್ಥಮಾಡಿಸಲು ಪ್ರಯತ್ನಿಸಿದಾಗ ಅವರು ಕೇಳಲು ತಯಾರೇಯಿಲ್ಲ. ನಾನು ಚೆನ್ನಾಗಿ ಊಟ ತಿಂಡಿ ಮಾಡ್ತೀನಿ. ನನಗೆ ಹೇಗೆ ಕೊರತೆಯಾಗಲು ಸಾಧ್ಯ? ಎಂಬುದು ಅವರ ವಾದ.

ನಮ್ಮಲ್ಲಿ ದಿನ ನಿತ್ಯ ಬರುವ ಬಹುತೇಕ ರೋಗಿಗಳಲ್ಲಿ ಆಹಾರ ಕ್ರಮ ಸರಿಯಿಲ್ಲದಿರುವುದು, ಸರಿಯಾದ ಆಹಾರ ಸೇವನೆ ಮಾಡದಿರುವುದು, ಆಹಾರಕ್ಕೆ ನಿಗದಿತ ಸಮಯ ಇಲ್ಲದಿರುವುದು, ಪೌಷ್ಠಿಕಾಂಶ ರಹಿತ ಆಹಾರ ಸೇವನೆ, ತಂಗಳು ಆಹಾರ ಹಾಗೂ ಬಹುಕಾಲ ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟ ಆಹಾರ ಸೇವನೆ, ನಾಲಿಗೆ ರುಚಿಗಾಗಿ ಇಲ್ಲವೇ ಹೊಟ್ಟೆ ತುಂಬಿಸಲಿಕ್ಕಾಗಿ ಆಹಾರ ಸೇವನೆ. ಹೀಗೆ ಹತ್ತು ಹಲವು ಆಹಾರ ಸಂಬಂಧಿ ಸಮಸ್ಯೆಗಳನ್ನು ಕಾಣುತ್ತೇವೆ.

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳದವರಿಲ್ಲ. ಆದರೂ ನಾವು ನಮ್ಮ ನಾಲಿಗೆಯ ರುಚಿಯ ದಾಸರಾಗಿ ರೋಗಗಳಿಗೆ ತುತ್ತಾಗುತ್ತಿದ್ದೇವೆ. ನಾಲಿಗೆಯ ರುಚಿಯ ಜೊತೆಗೆ ಪೌಷ್ಠಿಕಾಂಶಯುಕ್ತ ಅಹಾರ ಸೇವನೆಗೆೆ ಆದತ್ಯ ನೀಡಬೇಕಾಗಿದೆ. ನಾವು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾದ ಹಾಗೂ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಲಭ್ಯವಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ಆಹಾರ ಸೇವನೆಗೆ ಮುಂದಾಗಬೇಕಿದೆ.

ಪದೇ ಪದೇ ಕಾಡುವ ಅಜೀರ್ಣ, ಹೊಟ್ಟೆನೋವು, ಹುಳಿತೇಗು, ಹೊಟ್ಟೆ ಉರಿ, ಹೊಟ್ಟೆ ಊದಿಕೊಳ್ಳುವುದು, ಮಲಬದ್ಧತೆ, ಆಹಾರ ಸೇವಿಸಿದ ತಕ್ಷಣ ಪದೇ ಪದೇ ಮಲ ವಿಸರ್ಜನೆ, ಬಾಯಿಯಲ್ಲಿ ಹುಣ್ಣು, ಮೂಳೆ ಸವೆತ, ಸಂಧು ನೋವು, ಕುತ್ತಿಗೆ ನೋವು, ಕಣ್ಣಿನ ದೃಷ್ಟಿ ತೊಂದರೆಗಳು, ಚರ್ಮ ಸಂಬಂಧಿ ಸಮಸ್ಯೆಗಳು, ದೇಹದ ತೂಕ ಕಡಿಮೆಯಾಗುವುದು ಹಾಗೂ ಹೆಚ್ಚಾಗುವುದು, ಬಾಲನರೆ, ಕೂದಲು ಉದುರುವುದು ಇಂತಹ ನೂರಾರು ತೊಂದರೆಗಳು ಆಹಾರ ಮತ್ತು ಪೌಷ್ಠಿಕಾಂಶದ ಕೊರತೆಯಿಂದ ಉಂಟಾಗುವಂತಹುಗಳು.

ಆಹಾರದ ಬಗ್ಗೆ ನಾವು ಹೆಚ್ಚಿನ ಕಾಳಜಿಯನ್ನು ನೀಡಬೇಕಿದೆ. ಆಹಾರದ ವ್ಯತ್ಯಯ ಹಾಗೂ ಪೌಷ್ಠಿಕಾಂಶಗಳ ಕೊರತೆಯಿಂದ ಉಂಟಾಗುವ ಅನೇಕ ತೊಂದರೆಗಳು ಕೆಲವೊಮ್ಮೆ ಶಾಶ್ವತವಾಗಿ ದೇಹದ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತವೆ ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತವೆ. ಆನಾರೋಗ್ಯಕ್ಕೆ ತುತ್ತಾಗಿ ಪುನಃ ಆರೋಗ್ಯವಂತ ಸ್ಥಿತಿಗೆ ತಲುಪುವಲ್ಲಿ ಹಣ, ಸಮಯವನ್ನು ವ್ಯಯಿಸುವ ಜೊತೆಗೆ ಶಾರೀರಿಕ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸ ಬೇಕಾಗುತ್ತದೆ.

ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಅನೇಕ ಕಾಯಿಲೆಗಳು ಉತ್ಪತ್ತಿಯಾಗುತ್ತವೆ. ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಪ್ರೌಢಾವಸ್ಥೆಯ ಶಾರೀರಿಕ ಮಾಗೂ ಮಾನಸಿಕ ಸ್ವಾಸ್ಥ್ಯ ಮಕ್ಕಳ ಬೆಳವಣಿಗೆಯ ಹಂತದ ಮೇಲೆ ಅವಲಂಭಿತವಾಗಿರುತ್ತದೆ. ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳು ದೊರೆಯದಿದ್ದಾಗ ಮೆದುಳಿನ ಬೆಳವಣಿಗೆಗೆ ಘಾಸಿಯಾಗಿ ಮಾನಸಿಕ ವಿಕಸನವೂ ಕುಂಠಿತವಾಗುತ್ತದೆ.

ಹೆಚ್ಚಾಗುತ್ತಿರುವ ಬೇಕರಿ ತಿನಿಸುಗಳ ಸೇವನೆ, ಜಂಕ್ ಫುಡ್ಸ್, ಕಲಬರಕೆ ಆಹಾರ, ರಾಸಾಯನಿಕಗಳ ಬಳಕೆ, ಆಹಾರ ಕೆಡದಂತೆ ಇಡಲು ಬಳಸುವ ರಾಸಾಯನಿಕ ಸಂರಕ್ಷಕಗಳ ಬಳಕೆ, ಪಾಲಿಷ್ಡ್ ಅಕ್ಕಿಯ ಸೇವನೆ, ಬಾಟಲೀಕೃತ ಜ್ಯೂಸ್‌ಗಳ ಅತಿಯಾದ ಸೇವನೆ, ಮದ್ಯಪಾನ, ಧೂಮಪಾನ ಹಾಗೂ ನಶಕಾರಕ ಡ್ರಗ್ಸ್‌ಗಳ ಬಳಕೆಗಳಿಂದ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರುಗಳನ್ನು ಕಾಣುತ್ತಿದ್ದೇವೆ. ಇವುಗಳು ನೇರವಾಗಿ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳ ಕೊರತೆಯನ್ನುಂಟು ಮಾಡುತ್ತವೆ.

ತ್ವರಿತ ಗತಿಯಲ್ಲಿ ಸಾಗುತ್ತಿರುವ ವೈಜ್ಞಾನಿಕ ಆವಿಶ್ಕಾರಗಳೂ ಮನುಷ್ಯನ ಆಹಾರ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವಗಳನ್ನು ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಹಳಷ್ಟು ಆಹಾರದ ವಿಷಯವಾಗಿ ಕುರಿತ ತಪ್ಪು ಮಾಹಿತಿಗಳು ಸಾಮಾನ್ಯ ಜನರನ್ನು ದ್ವಂದ್ವಕ್ಕೆ ದೂಡುತ್ತಿರುವುದನ್ನು ಇಲ್ಲಿ ಸ್ಮರಿಸಲೇಬೇಕು. ವೈಯಕ್ತಿಕ ಹಿತಾಸಕ್ತಿ ಹಾಗೂ ವ್ಯಾಪಾರೀಕರಣದ ಮನೋಭಾವ ಮುಗ್ಧ ಜನರ ಪೌಷ್ಠಿಕಾಂಶದ ಕೊರತೆಗೆ ಕಾರಣವಾಗುತ್ತಿರುವುದಂತೂ ಅಕ್ಷರಶ: ಸತ್ಯ.

ಆಹಾರ ಹಾಗೂ ಪೌಷ್ಠಿಕಾಂಶದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುವ ಸಲುವಾಗಿಯೇ ಭಾರತ ಸರ್ಕಾರವು ಸೆಪ್ಟೆಂಬರ್ ಒಂದರಿಂದ ಏಳನೇ ತಾರೀಖಿನವರೆಗೆ ಒಂದು ವಾರಗಳ ಕಾಲ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹವನ್ನು 1982ರಿಂದ ಆಚರಿಸುತ್ತಾ ಬರುತ್ತಿದೆ. ಅಮೇರಿಕಾದ ಪೋಷಣೆ ಮತ್ತು ಆಹಾರ ಪದ್ಧತಿಯ ಸಂಸ್ಥೆಯು ಪೌಷ್ಠಿಕಾಂಶ ಹಾಗೂ ಆಹಾರದ ಮಹತ್ವವನ್ನು ಮನಗಂಡು ಪ್ರಾರಂಭಿಸಿದ ಕಾರ್ಯಕ್ರಮವು ಭಾರತದಲ್ಲಿಯೂ ಪ್ರತಿವರ್ಷವೂ ಆಚರಿಸಲಾಗುತ್ತಿದೆ.

ಆಯುರ್ವೇದ ವೈದ್ಯಶಾಸ್ತçವೂ ಮನುಷ್ಯರ ಆಹಾರ ಪದ್ಧತಿ ಮತ್ತು ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವುದರ ಜೊತೆಗೆ ಆರೋಗ್ಯವಂತನ ಆರೋಗ್ಯ ರಕ್ಷಣೆಗಾಗಿ ಋತುಮಾನಕ್ಕನುಗುಣವಾಗಿ ವಿಶೇಷ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ವಿವರಿಸಿದೆ. ರೋಗಿಗಳ ಕಾಯಿಲೆ, ಬಲ, ದೋಷಗಳ ಪ್ರಧಾನತೆಯ ಅನುಸಾರವಾಗಿ ಆಹಾರ ಪದ್ಧತಿಯನ್ನು ಆಯುರ್ವೇದವು ಒಳಗೊಂಡಿದೆ. ಆಹಾರದಿಂದ ಆರೋಗ್ಯ ಭಾಗ್ಯವೆಂಬುದನ್ನು ಎಲ್ಲರೂ ಅರಿತು ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

  • ಡಾ. ಎಸ್.ಎ. ನಿತಿನ್
    ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳು
    ರಾಜೀವ್ ಆಯುರ್ವೇದ ಮಹಾವಿದ್ಯಾಲಯ