ಮುಂಬೈ : ಮುಂಬೈ ರಾಜಕೀಯ ರಣರಂಗ:‘ತಾಕತ್ ಇದ್ರೆ ಮುಟ್ಟಿ ನೋಡು’ – ರಾಜ್ ಠಾಕ್ರೆಗೆ ಅಣ್ಣಾಮಲೈ ಖಡಕ್ ಎಚ್ಚರಿಕೆ

ಮುಂಬೈ : ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಮುಂಬೈ ಅಂತಾರಾಷ್ಟ್ರೀಯ ನಗರ ಎಂದು ಅಣ್ಣಾಮಲೈ ನೀಡಿದ ಹೇಳಿಕೆಗೆ ಕಿಡಿಕಾರಿದ್ದ ರಾಜ್ ಠಾಕ್ರೆ, ‘ಆ ರಸಮಲೈ ಯಾರು?’ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, “ನನ್ನನ್ನು ಬೆದರಿಸಲು ನೀವು ಯಾರು? ನಾನು ಮುಂಬೈಗೆ ಬರುತ್ತೇನೆ, ತಾಕತ್ ಇದ್ರೆ ಮುಟ್ಟಿ ನೋಡು” ಎಂದು ಸವಾಲು ಹಾಕಿದ್ದಾರೆ.

ರಾಜ್ ಠಾಕ್ರೆಯ ಬೆದರಿಕೆಗಳಿಗೆ ನಾನು ಹೆದರೋದಿಲ್ಲ. ನಾನು ರೈತನ ಮಗ. ರಾಜ್ ಠಾಕ್ರೆ ಆಗಲಿ, ಆದಿತ್ಯ ಠಾಕ್ರೆ ಆಗಲಿ ನನಗೆ ಬೆದರಿಕೆ ಹಾಕುವ ಹಕ್ಕಿಲ್ಲ ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಮುಂಬೈಗೆ ಬಂದರೆ ಕಾಲು ಕಟ್ ಮಾಡುತ್ತೇವೆ ಎಂಬ ಹೇಳಿಕೆಗಳಿಗೆ ಪ್ರತಿಯಾಗಿ, “ಇಂತಹ ಬೆದರಿಕೆ ನನ್ನ ಮುಂದೆ ನಡೆಯಲ್ಲ. ನೋಡೇ ಬಿಡೋಣ ಏನು ಮಾಡುತ್ತೀರಿ” ಎಂದು ಕಿಡಿಕಾರಿದ್ದಾರೆ.

ಇದಕ್ಕೂ ಮೊದಲು ಮುಂಬೈ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಧಾರಾವಿ ಸೇರಿದಂತೆ ತಮಿಳಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಣ್ಣಾಮಲೈ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಮುಂಬೈ ಕೇವಲ ಮಹಾರಾಷ್ಟ್ರದ ನಗರವಲ್ಲ, ಇದು ಅಂತಾರಾಷ್ಟ್ರೀಯ ನಗರ. ಮುಂಬೈ ಮಹಾನಗರ ಪಾಲಿಕೆಯ ಬಜೆಟ್ 75 ಸಾವಿರ ಕೋಟಿ ರೂಪಾಯಿ ಎಂದು ಅವರು ಹೇಳಿದ್ದರು.

ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ, ಇತರ ರಾಜ್ಯಗಳಿಂದ ಬಂದವರು ಮರಾಠಿ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿ ಹಾಗೂ ಇತರ ಭಾಷೆಗಳನ್ನು ಹೇರಲಾಗುತ್ತಿದೆ ಎಂದು ಕಿಡಿಕಾರಿದ ಅವರು, ಅಗತ್ಯವಿದ್ದರೆ ಬಾಳ ಠಾಕ್ರೆಯ ‘ಲುಂಗಿ ಉಟಾವೋ, ಪುಂಗಿ ಬಜಾವೋ’ ಆಂದೋಲನವನ್ನು ಮತ್ತೆ ಜಾರಿಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಅಣ್ಣಾಮಲೈಗೆ ‘ರಸಮಲೈ’ ಎಂದು ನಿಂದಿಸಿ, ದಕ್ಷಿಣ ಭಾರತೀಯರ ವಿರುದ್ಧವೂ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.