ಬೇಲೂರು :ಸಂವಿಧಾನದಿಂದ ಎಲ್ಲರಿಗೂ ಅಧಿಕಾರ ಸಿಕ್ಕಿದೆ: ಶಾಸಕ ಎಚ್.ಕೆ. ಸುರೇಶ್

MLA H.K. Suresh said that Dr. B.R. Ambedkar, who created the best constitution in the world and lit the lamp of knowledge for the world, has brought fame to India as a world human being.

ಬೇಲೂರು: ಪ್ರಪಂಚದಲ್ಲೇ ಅತ್ಯುತ್ತಮವಾದ ಸಂವಿಧಾನ ರಚಿಸಿ ಜಗತ್ತಿಗೆ ಜ್ಞಾನದ ಜ್ಯೋತಿ ಬೆಳಗಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಮಾನವರಾಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿರುವ ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿ ಪ್ರವಾಸ ಹೊರಟ ಡಾ.ಅಂಬೇಡ್ಕರ್ ಅನುಯಾಯಿಗಳ ಬಸ್‌ಗೆ ಮಂಗಳವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಅವರು ಪ್ರಪಂಚದಲ್ಲೇ ಉತ್ಕೃಷ್ಟವಾದ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಎಲ್ಲ ಜನ ಸಾಮಾನ್ಯರಿಗೂ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಹಕ್ಕು ಅಧಿಕಾರ ಕೊಡಿಸಿದ್ದಾರೆ. ಹಾಗೂ ಇಂದು ನಾನೇನಾದರೂ ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ನಮ್ಮ ಸಂವಿಧಾನವೇ ಕಾರಣ ಎಂದರು.

ಭಾರತೀಯರಾದ ನಾವು ಸಂವಿಧಾನದ ಆಶಯದಂತೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಬೇಲೂರಿನಿಂದ ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಗೆ ಅನುಯಾಯಿಗಳಾಗಿ ಪ್ರವಾಸ ಹೊರಟಿದ್ದು, ಸಮಾಜ ಕಲ್ಯಾಣ ಇಲಾಖೆ ಮೂಲಕ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದರು.

ಇದರ ಸದೂಪಯೋಗವನ್ನು ಪಡೆದು, ದೀಕ್ಷಾ ಭೂಮಿಯಿಂದ ಉತ್ತಮ ಜ್ಞಾನವಂತರಾಗಿ ಬನ್ನಿ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳಿದ್ದರೂ ನನ್ನೆಲ್ಲ ಕಾರ್ಯಕ್ರಮ ರದ್ದುಗೊಳಿಸಿ ಭಾಗವಹಿಸುತ್ತೇನೆ. ಮತ್ತು ದೀಕ್ಷಾ ಭೂಮಿಗೆ ಹೊರಟಿರುವ ಎಲ್ಲರೂ ಸುಖಕರವಾಗಿ ಹೋಗಿ ಬರಲಿ ಎಂದು ಶೂಭ ಕೋರಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್-1) ಲಿಂಗರಾಜು ಮಾತನಾಡಿ, ಸರ್ಕಾರ ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಗೆ ಉಚಿತವಾಗಿ ತೆರಳಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಜತೆಗೆ ಶಾಸಕರು, ಪ್ರವಾಸ ಹೊರಟವರಿಗೆ ಯಾವುದೇ ಕುಂದು ಕೊರತೆಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದರು. ಅದರಂತೆ ಉತ್ತಮ ಬಸ್‌ನೊಂದಿಗೆ ನಮ್ಮ ಸಿಬ್ಬಂದಿಯೂ ಸಹ ಪ್ರವಾಸಿಗರೊಂದಿಗೆ ತೆರಳಿ ಅವರ ಯೋಗಕ್ಷೇಮ ನೋಡಿಕೊಳ್ಳಲಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಗೌಡಪ್ಪ ಸೈಲಿ, ನಾಗೇಶ್, ಸತೀಶ್, ಅಭಿ, ಯೋಗೇಶ್, ರಮೇಶ್, ಆಶಾ ಹಾಗೂ ದಲಿತ ಮುಖಂಡರಾದ ಮಂಜುನಾಥ್, ಹೊನ್ನಯ್ಯ,  ಸಿದ್ದಮಂಜು, ಮಲ್ಲೇಶ್, ವೀರಭದ್ರ ಸೇರಿದಂತೆ ಇತರರಿದ್ದರು.