ಆಲೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿಯಾಗಿದೆ. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಗುರುತಿಸಿ ಹೊರತರಲು ಇಂಥ ವೇದಿಕೆಗಳು ಸಹಕಾರಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಹೆಚ್ಚೆಚ್ಚು ಭಾಗವಹಿಸಬೇಕು. ಪ್ರೌಢಶಾಲೆಯ ಹಂತ ಎಂಬುವುದು ತಳಪಾಯದಂತೆ. ಇಲ್ಲಿಗಟ್ಟಿಯಾಗಿ ನಿಂತರೆ ಮುಂದೆ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯ. ಈ ಹಂತದಲ್ಲಿರುವಾಗಲೇ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರದ ಗುಣಗಳನ್ನು ಕಲಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಮಕ್ಕಳಿಗಾಗಿ ಸಂಪತ್ತು ಸಂಗ್ರಹಿಸುವ ಬದಲು, ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡಿ ಮಕ್ಕಳನ್ನೇ ರಾಷ್ಟ್ರದ ಅಮೂಲ್ಯ ಆಸ್ತಿಯನ್ನಾಗಿಸಬೇಕು ಎಂದರು.
ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಗೆ ಒಂದು ನೂತನ ರಂಗಮಂದಿರ ನಿರ್ಮಾಣ ಮಾಡಲು ಅನುದಾನ ಮೀಸಲಿಡುವುದಾಗಿ ಭರವಸೆ ನೀಡಿದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಘು ಮಾತನಾಡಿ, ಮಕ್ಕಳು ಮನೆಯ ನಂದಾದೀಪವಿದ್ದಂತೆ. ಭವಿಷ್ಯದ ಆಶಾಜ್ಯೋತಿಗಳು. ಅವರ ಬುದ್ಧಿ ಚುರುಕುಗೊಳಿಸಿ ಸದೃಢರನ್ನಾಗಿಸುವ ಗುಣಮಟ್ಟದ ಶಿಕ್ಷಣ ಜೊತೆಗೆ ಅವರಿಗೆ ಸಾಂಸ್ಕೃತಿಕ ಚುಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದು ಅತ್ಯಗತ್ಯ ಎಂದು ತಿಳಿಸಿದರು.
2025-26ನೇ ಸಾಲಿನ ಪಾಳ್ಯ ಹೋಬಳಿ, ಕ್ಲಸ್ಟರ್ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ. GHS ಚಿಕ್ಕಕಣಗಾಲು, GHS ಕಣತೂರು, GHS ಮಡಬಲು, GHS ಕಾಮತಿಕೊಡಿಗೆ, GHS ಬೆಟ್ಟಳ್ಳಿ ಕ್ರಾಸ್, ನೀಲಲೋಚನಾ ಪಾಳ್ಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸೆಂಟ್ ಜೋಸೆಫ್ ಪ್ರೌಢ ಶಾಲೆ, ಕಿರಣ್ ಕಾನ್ವೆಂಟ್ ಕಣತೂರು ಶಾಲಾ ತಂಡಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರಪ್ಪ, ಎಸ್ ಡಿ ಎಮ್ ಸಿ ಅಧ್ಯಕ್ಷ ಕೃಷ್ಣಮೂರ್ತಿ, ಡೈರಿ ಅಧ್ಯಕ್ಷ ರವಿಪ್ರಕಾಶ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.










