ಸಕ‌ಲೇಶಪುರ: ರೂ.1.30 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ: ಶಾಸಕ ಸಿಮೆಂಟ್ ಮಂಜು

MLA Cement Manju said that the grants brought by the government for the comprehensive development of the sector will soon be released to the public along with statistics.

ಸಕಲೇಶಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ತಂದಿರುವ ಅನುದಾನವನ್ನು ಅಂಕಿ-ಅಂಶಗಳೊಂದಿಗೆ ಶೀಘ್ರದಲ್ಲೇ ಸಾರ್ವಜನಿಕರ ಮುಂದೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ನೂತನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ವಡೂರು ಗ್ರಾಮದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಸುಸಜ್ಜಿತ ರಸ್ತೆ ಇಲ್ಲದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಶಾಸಕನಾಗಿ ಆಯ್ಕೆಯಾದರೆ ಇಲ್ಲಿ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದೆ. ಆ ಭರವಸೆಯಂತೆ ಇಂದು ₹75 ಲಕ್ಷ ವೆಚ್ಚದಲ್ಲಿ 875 ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಪಟ್ಟಣದ ಒಳರಸ್ತೆಗಳು, ಪಟ್ಟಣದಿಂದ ಉಮಾಶಂಕರ್ ಸಮುದಾಯ ಭವನದ ಮೂಲಕ ಹಾಲೇಬೇಲೂರು ಕಡೆಗೆ ಹೋಗುವ ರಸ್ತೆ, ಕಬ್ಬಿನಗದ್ದೆ ರಸ್ತೆ, ಹೊಸಕೋಟೆ ರಸ್ತೆ, ಶೆಟ್ಟಿಹಳ್ಳಿ ರಸ್ತೆ ಸೇರಿದಂತೆ ಈ ಭಾಗದಲ್ಲಿ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಇದೇ ರೀತಿಯಾಗಿ, ಹಲವು ದಶಕಗಳಿಂದ ಸುಸಜ್ಜಿತ ರಸ್ತೆ ಕಾಣದ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಿಗನಹಳ್ಳಿ–ಬಸವಪುರ ರಸ್ತೆಗೆ ₹20 ಲಕ್ಷ ಹಾಗೂ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿರ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿ, ಶಾಲೆಗಳ ದುರಸ್ತಿ, ಸ್ಮಶಾನ ಅಭಿವೃದ್ಧಿ, ಗ್ರಂಥಾಲಯ ಕಟ್ಟಡ ನಿರ್ಮಾಣ, ಕೆರೆ ಅಭಿವೃದ್ಧಿ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಬಾಳಿಗನಹಳ್ಳಿ–ಬಸವಪುರ ಗ್ರಾಮದಲ್ಲಿ ಹಲವು ಶತಾಯುಷಿಗಳು ತಮ್ಮ ಜೀವನಾವಧಿಯಲ್ಲಿ ಸುಸಜ್ಜಿತ ರಸ್ತೆ ನೋಡದೇ ಇರುವುದು ದುರಂತವೆಂದು ಬೇಸರ ವ್ಯಕ್ತಪಡಿಸಿದ ಅವರು, ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರು ರಸ್ತೆ ದುಸ್ಥಿತಿಯ ಬಗ್ಗೆ ತಮ್ಮ ಗಮನಕ್ಕೆ ತಂದ ತಕ್ಷಣವೇ ಅನುದಾನ ಮೀಸಲಿಟ್ಟು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಇಲ್ಲಿ ಇನ್ನೂ ಸುಮಾರು 1 ಕಿ.ಮೀ ರಸ್ತೆ ಕಾಮಗಾರಿ ಬಾಕಿಯಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ಪ್ರತಿಯೊಂದು ಗ್ರಾಮದ ರಸ್ತೆಗಳ ಸ್ಥಿತಿ ನನಗೆ ತಿಳಿದಿದೆ. ಕಳೆದ 2.5 ವರ್ಷಗಳಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿದ್ದೇನೆ. ಸಾರ್ವಜನಿಕರಿಗಾಗಿ ನನ್ನ ಬಹುಪಾಲು ಸಮಯವನ್ನು ಮೀಸಲಿಟ್ಟಿದ್ದೇನೆ. ನಾನು ಕಾರಿನಲ್ಲಿ ಕುಳಿತು ಸುಮ್ಮನೆ ಹೋಗುವುದಿಲ್ಲ; ಯಾವ ಗ್ರಾಮಕ್ಕೆ ಏನು ಅಗತ್ಯವಿದೆ ಎಂಬುದನ್ನು ಗುರುತಿಸಿ ಕೆಲಸ ಮಾಡುತ್ತೇನೆ. ಕೆಲವೇ ದಿನಗಳಲ್ಲಿ ನಾನು ತಂದ ಅನುದಾನ ಹಾಗೂ ಮಾಡಿರುವ ಅಭಿವೃದ್ಧಿ ಕಾರ್ಯಗಳ ವಿವರವನ್ನು ಇಲಾಖೆವಾರು ಅಂಕಿ-ಅಂಶಗಳೊಂದಿಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಕ್ಷೇತ್ರದ 2 ಲಕ್ಷ 10 ಸಾವಿರ ಜನರ ಧ್ವನಿಯಾಗಲು ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಸೋಮಾರಿತನದಿಂದ ಸಮಯ ವ್ಯರ್ಥ ಮಾಡಿಲ್ಲ. ಅನುದಾನ ಮಾತ್ರವೇ ಅಭಿವೃದ್ಧಿಯಲ್ಲ; ಸರ್ಕಾರದಿಂದ ಆಗಬೇಕಾದ ತಾಂತ್ರಿಕ ಕಾರ್ಯಗಳನ್ನು ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿರೋಧಿಗಳ ಅಪಪ್ರಚಾರವನ್ನು ಜನರು ಎಂದಿಗೂ ನಂಬುವುದಿಲ್ಲ ಎಂದು ಹೇಳಿದರು.

ಗ್ರಾಮಸ್ಥ ವಿರೂಪಾಕ್ಷ ಮಾತನಾಡಿ, ಹಿಂದಿನ ಶಾಸಕರಾದ ಕುಮಾರಸ್ವಾಮಿಯವರು ಕನಿಷ್ಠ ರಸ್ತೆ ಗುಂಡಿಯನ್ನು ಮುಚ್ಚಿಸುವ ಕೆಲಸಕ್ಕೂ ಮುಂದಾಗಲಿಲ್ಲ. ಆದರೆ 15 ವರ್ಷಗಳಿಂದ ಆಗದ ರಸ್ತೆ ಕಾಮಗಾರಿಯನ್ನು ಶಾಸಕ ಸಿಮೆಂಟ್ ಮಂಜು ಅವರು ಕೈಗೆತ್ತಿಕೊಂಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರವನ್ನು ದಿನನಿತ್ಯ ಸುತ್ತಿ, ಸೂಕ್ಷ್ಮವಾಗಿ ಸಮಸ್ಯೆಗಳನ್ನು ಗಮನಿಸಿ ಜನಪರ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ನಾವೆಲ್ಲರೂ ಮಂಜಣ್ಣನವರ ಕೈ ಬಲಪಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಮಹೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷ, ಬಿಜೆಪಿ ಸ್ಥಳೀಯ ಮುಖಂಡರಾದ ಪಾಲಾಕ್ಷ, ಕೇಶವ, ರಾಮಚಂದ್ರು, ಕುಮಾರ್, ತ್ರಿಯಂಬಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

MLA Cement Manju said that the grants brought by the government for the comprehensive development of the sector will soon be released to the public along with statistics.