ಸಕಲೇಶಪುರ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಕಲೇಶಪುರ, ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸರ್ಕಾರ ಮೂರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಶುಕ್ರವಾರ ತಾಲೂಕಿನ ಹೆತ್ತೂರು ಹೋಬಳಿ ಕೇಂದ್ರದಲ್ಲಿ ನೂತನ ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಹೊಸಕೋಟೆ ಹೋಬಳಿ ಕೇಂದ್ರ, ಆಲೂರು ತಾಲ್ಲೂಕು ಅಬ್ಬನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಹೆತ್ತೂರು ಹೋಬಳಿ ಕೇಂದ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.
ಹೆತ್ತೂರು ಹೋಬಳಿ ರಾಜ್ಯ ಮತ್ತು ಜಿಲ್ಲಾ ರಾಜಕಾರಣವನ್ನು ನಿರ್ಧಾರಿಸುವಷ್ಟು ಮಟ್ಟಕ್ಕೆ ಗುರುತಿಸಿಕೊಂಡಿರುವ ಹೋಬಳಿಯಾಗಿದೆ. ಇಲ್ಲಿ ಬೆಳೆಗಾರರ ಸಂಘ, ದಲಿತ ಹೋರಾಟಗಾರರು ಹಾಗೂ ಪ್ರಗತಿಪರ ರೈತರು, ಇದ್ದಾರೆ ಎನ್ನುವುದು ಹೆಮ್ಮೆ ವಿಚಾರ.
ಇಲ್ಲಿನ ಅಂಬೇಡ್ಕರ್ ಭವನ ನಿರ್ಮಾಣಬೇಕು ಎಂಬುವುದು ಗ್ರಾಮಸ್ಥರ ಬಹುದಿನಗಳ ಕನಸಾಗಿತ್ತು ಅದರಂತೆ ಸುಮಾರು ₹ 75 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ನೆಡೆಯಲಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಮತದಾರರು ನೀಡಿದ ಮತವನ್ನು ಕಿಂಚಿತ್ತು ದುರ್ಬಳಕೆ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ.
ಕ್ಷೇತ್ರದ ಮೂಲಭೂತ ಸಮಸ್ಯೆಗಳು, ಕಾಡಾನೆ ಹಾವಳಿ ಸಮಸ್ಯೆ ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಾಫಿ ಬೆಳೆಗಾರರು ಹಾಗೂ ರೈತರಿಗೆ ಆಗಿರುವ ನಷ್ಟದ ಕುರಿತು ಕ್ಷೇತ್ರದ ಜನರ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಕೆಲಸವನ್ನು ಮಾಡಿದ್ದೇನೆ ಎಂದರು. ಕ್ಷೇತ್ರಕ್ಕೆ ಸರ್ಕಾರಿದಿಂದ ಬರಬೇಕಾಗಿರುವ ಅನುದಾನವನ್ನು ಯಾವುದೇ ರಾಜಿಗೆ ಒಳಗಾಗದೆ ತರುವ ಕೆಲಸವನ್ನು ಮಾಡುತ್ತೇನೆ.
ಮಲಯಾಳಂ ಆಗದಿಂದ ಬಯಲು ಸೀಮೆಗೆ ನೀರು ಎತ್ತುವ ಎತ್ತಿನಹೊಳೆ ಯೋಜನೆ ಬಹುಪಾಲು ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆದಿದೆ ಆದರೆ ನಾನು ಶಾಸಕನಾಗಿ ಎರಡು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗದಿರುವುದನ್ನ ಮುಖ್ಯಮಂತ್ರಿ ಆಗುವ ಉಪಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ ಅದರಂತೆ ಇದೀಗ ಸರ್ಕಾರ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರದಾದ್ಯಂತ ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದು ತಿಳಿಸಿದರು.
ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ನ್ಯಾಯವಿತವಾಗಿ ಪರಿಹಾರ ದೊರಕಿಲ್ಲ ಎಂದು ಅಸಮಾಧಾನ ತೋಡಿಕೊಂಡರು. ಈ ಕುರಿತಂತೆ ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕ ಎಚ್. ಎಂ ವಿಶ್ವನಾಥ್ ಮಾತನಾಡಿ, ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಹಾವಳಿಯಿಂದ ಗುಣಮಟ್ಟದ ಕಾಮಗಾರಿ ನೆಡೆಸಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಶೇ. 40-50 % ಪರ್ಸೆಂಟ್ ಕೊಡಲೇಬೇಕು ಇದರಿಂದ ಗುಣಮಟ್ಟದ ಕಾಮಗಾರಿ ನಡೆಸುವುದಾದರೂ ಹೇಗೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಮಾಜ ಸತ್ಯ ಮತ್ತು ಅಶಾಂತಿಯ ಮೇಲೆ ಅವಲಂಬನೆಯಾಗಿದ್ದು ಇವುಗಳನ್ನು ಜನರು ಮರೆತರೆ ಸಮಾಜ ಉಳಿಯುವುದಿಲ್ಲ ಎಂದರು.
ನನ್ನ ಶಾಸಕ ಅವಧಿಯಲ್ಲಿ ಆರಂಭಿಸಿದ್ದ ಅಭಿವೃದ್ಧಿ ಕಾರ್ಯಗಳಿಗೆ ಆ ಕಾಮಗಾರಿಗಳ ಉದ್ಘಾಟನಾ ಸಮಯದಲ್ಲಿ ಸ್ಥಾಪನ ಕಲ್ಲು ನಿರ್ಮಾಣದಲ್ಲೂ ರಾಜಕೀಯ ಮಾಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನನ್ನ ವೈಯಕ್ತಿಕವಾಗಿ ₹ 25 ಸಾವಿರ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹೆತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಅನುಸೂಯ, ಹೊಂಗಡಹಳ್ಳ ಗ್ರಾ ಪಂ ಅಧ್ಯಕ್ಷೆ ವನಜಾಕ್ಷಿ, ಕೆ.ಆರ್.ಡಿ.ಐ ಇಂಜಿನಿಯರ್ ಅಣ್ಣಯ್ಯ, ಕೆಡಿಪಿ ನಾಮ ನಿರ್ದೇಶನ ಸದಸ್ಯ ಕೋಮಾರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಬೆಳಗೋಡು ಕೃಷಿ ಪತ್ತಿನ ಅಧ್ಯಕ್ಷ ಬಸವರಾಜ್, ಗ್ರಾ.ಪಂ ಸದಸ್ಯ ಡಿಲಾಕ್ಷ, ಯಸಳೂರು ವಲಯ ಅರಣ್ಯ ಅಧಿಕಾರಿ ರೇವಣ್ಣ ಸಿದ್ದಯ್ಯ ಹಿರೇಮಠ್, ಭೀಮ ವಿಜಯ ಪತ್ರಿಕೆ ಸಂಪಾದಕರಾದ ಹೆತ್ತೂರು ನಾಗರಾಜ್ ದಿಟ್ಟ ನುಡಿ ಪತ್ರಿಕೆ ಸಂಪಾದಕಾರದ ದೊಡ್ಡಯ್ಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.










