ಸಕಲೇಶಪುರ: ನನ್ನ ಅಧಿಕಾರದವಧಿಯಲ್ಲಿ ಹೊಸ ಸಮುದಾಯ ಭವನಗಳ ನಿರ್ಮಾಣಕ್ಕಿಂತಪ ಅಪೂರ್ಣಗೊಂಡಿರುವ ಸಮುದಾಯ ಭವನಗಳ ಕಾಮಗಾರಿಗಳನ್ನು ಮುಗಿಸಲು ಆದ್ಯತೆ ನೀಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜನ್ನಾಪುರ ಗ್ರಾಮದಲ್ಲಿ ಶಾಸಕ ಸಿಮೆಂಟ್ ಮಂಜುರವರು ನೂತನವಾಗಿ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮಗಳಲ್ಲೂ ಸಮುದಾಯ ಭವನಗಳಿರಬೇಕು. ಇದರಿಂದ ಬಡವರು ದುಬಾರಿ ಬಾಡಿಗೆ ನೀಡಿ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳು ಮಾಡುವುದು ತಪ್ಪುತ್ತದೆ.
ಗಂಗಾ ಮತಸ್ಥ ಸಮುದಾಯವು ಕಡಿಮೆ ಜನಸಂಖ್ಯೆಯಿದ್ದರು ಸಹ ಸರ್ಕಾರಿ ಅನುದಾನಗಳ ಜೊತೆಗೆ ಸುಮಾರು 20ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಮಾಡಿ ಈ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ, ನಾನು ಸಹ ಸುಮಾರು 5 ಲಕ್ಷ ರೂ ಅನುದಾನ ಈ ಭವನಕ್ಕೆ ನೀಡಿದ್ದೇನೆ. ಜನ್ನಾಪುರ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇನೆ. ಅಧಿಕಾರ ಶಾಶ್ವತ ಅಲ್ಲ ನಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದೇವೆಂಬುದು ಮುಖ್ಯ ಎಂದು ಹೇಳಿದರು.
ಬಿರಡಹಳ್ಳಿ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಈ ಹಿಂದಿನ ಶಾಸಕರು , ಹಾಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಹಲವಾರು ಮಂದಿ ಈ ಭವನದ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಶಾಸಕ ಸಿಮೆಂಟ್ ಮಂಜುರವರು ನಮ್ಮ ಸಮುದಾಯ ಭವನಕ್ಕೆ ಅನುದಾನ ನೀಡಿರುವುದಲ್ಲದೆ ಗ್ರಾಮಕ್ಕೆ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಸಮುದಾಯ ಭವನದ ಪಕ್ಕ ದೇವಸ್ಥಾನವೊಂದನ್ನು ನಿರ್ಮಾಣ ಮಾಡುವ ಯೋಜನೆಯಿದ್ದು ಶಾಸಕರು ಇದಕ್ಕೂ ಸಹ ನೆರವು ನೀಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶೃತಿ, ಮಾಜಿ ಅಧ್ಯಕ್ಷರುಗಳಾದ ಸತೀಶ್, ಶಾರದಾ, ಮಧುಮಣಿ, ವನಜಾಕ್ಷಿ, ಬೈಕೆರೆ ದೇವರಾಜ್ , ಗಂಗ ಮತಸ್ಥ ಸಮಾಜದ ಗೋಪಾಲ್, ಧರ್ಮಪ್ಪ, ಮಂಜುನಾಥ್ , ಪಿಡಿಓ ಪಲ್ಲವಿ ಸೇರಿದಂತೆ ಇತರರು ಹಾಜರಿದ್ದರು.
MLA Cement Manju said that during my tenure, I will prioritize completing the work of incomplete community halls rather than constructing new community halls.










