ಸಕಲೇಶಪುರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಬಿಜೆಪಿ ಪ್ರತಿಭಟನೆ – ರೈತರ ಪರ ಕಿಡಿಕಾರಿದ ಶಾಸಕ ಸಿಮೆಂಟ್ ಮಂಜು

MLA Cement Manju alleged that while farmers are fighting for their livelihood, some leaders are jockeying for power, which is a clear example of the government's inadequacy and negligence.

ಸಕಲೇಶಪುರ : ರೈತರು ಬದುಕಿಗಾಗಿ ಹೋರಾಡುತ್ತಿದ್ದರೂ, ಕೆಲವು ನಾಯಕರು ಅಧಿಕಾರಕ್ಕಾಗಿ ಕುರ್ಚಿ ಕಿತ್ತಾಟದಲ್ಲಿದ್ದಾರೆ, ಇದು ಸರ್ಕಾರದ ಅಸಮರ್ಪಕತೆ ಮತ್ತು ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಎಂದು ಶಾಸಕ ಸಿಮೆಂಟ್ ಮಂಜು ಆರೋಪಿಸಿದರು.

ಬಿಜೆಪಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ಕಾಫಿ, ಬತ್ತ, ಮೆಣಸು, ಅಡಿಕೆ, ಏಲಕ್ಕಿ ಸೇರಿದಂತೆ ಎಲ್ಲಾ ಬೆಳೆಗಳು ಮಳೆಯಿಂದ ಸಂಪೂರ್ಣ ನಾಶವಾದ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರ ಕೈಚಲ್ಲಿ ಕುಳಿತಿದೆ ಎಂದು ಹೇಳಿದರು.

ರೈತರ ಬೆಳೆ ಕೊಚ್ಚಿಕೊಂಡು ಹೋಗಿ, ಕಣ್ಣೀರು ಬರುವ ಪರಿಸ್ಥಿತಿ ಉಂಟಾಗಿದೆ. ಆದರೆ ಸರ್ಕಾರಕ್ಕೆ ಅಧಿಕಾರದ ಕಿತ್ತಾಟವೇ ಮುಖ್ಯವಾಗಿದ್ದು, ಬೆಳೆ ಹಾನಿ ಪರಿಶೀಲನೆ ಹಾಗೂ ಪರಿಹಾರದ ಬಗ್ಗೆ ಯಾವುದೇ ಸ್ಪಂದನೆ ಇಲ್ಲ. ಬಡ ರೈತರು ವಿಷ ಪಡುವ ಪರಿಸ್ಥಿತಿ ಬಂದಿದೆ. ಇಂತಹ ಸರ್ಕಾರಕ್ಕೆ ನಾಚಿಕೆ ಬೇಕು ಎಂದು ಅವರು ಕಿಡಿಕಾರಿದರು.

ಬೆಳೆ ನಾಶವಾದರೂ ಸರ್ಕಾರ ಪರಿಹಾರ ಘೋಷಣೆಯಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು. ರೈತರ ಬದುಕು ಉಳಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ವೈಯಕ್ತಿಕ ರಾಜಕೀಯ ಆಸಕ್ತಿಗಳನ್ನು ಬದಿಗಿಟ್ಟು ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿ ರೈತರ ಪರ ಹೋರಾಟ ಮುಂದುವರಿಸುವುದಾಗಿ, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮುಖಂಡ ಅಮಿತ್ ಶೆಟ್ಟಿ ಮಾತನಾಡಿ, ಕಳೆದ ಎಂಟೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ ಎಂದು ಟೀಕಿಸಿದರು.

ಶಾಸಕರಾದ ಸಿಮೆಂಟ್ ಮಂಜು ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸರ್ಕಾರಕ್ಕೆ ಕಳುಹಿಸಿದರೂ, ಇದುವರೆಗೆ ಕ್ರಮ ಕೈಗೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯ ಎಂದು ಹೇಳಿದರು.

ಕಾಡಾನೆ–ಕಾಡುಕೋಣ ದಾಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಾಶವಾದರೂ ಪರಿಹಾರ ಸಿಗದಿರುವುದನ್ನು ಅವರು ಖಂಡಿಸಿದರು. ಬಿಜೆಪಿ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದು, ಡಿಸೆಂಬರ್ 1–2ರಂದು ಜಿಲ್ಲಾಮಟ್ಟದಲ್ಲಿ ಹಾಗೂ ಡಿಸೆಂಬರ್ 8ರಂದು ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಅಶ್ವತ್ ವಳಲಹಳ್ಳಿ ಮಾತನಾಡಿ, ಯಡಿಯೂರಪ್ಪ ಸರ್ಕಾರದ ಕಾಲದಲ್ಲಿ ರೈತರಿಗೆ ನೀಡಿದ್ದ ಪರಿಹಾರವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಆದರೆ ಈಗಿನ ಸರ್ಕಾರ ಪರಿಹಾರ ನೀಡದೆ ಜನರ ವಿಶ್ವಾಸ ವಂಚಿಸಿದೆ ಎಂದು ಆರೋಪಿಸಿದರು. ಮಳೆ, ಕಾಡುಪ್ರಾಣಿಗಳ ದಾಳಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ—ಎಲ್ಲ ಸಮಸ್ಯೆಗಳಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಕ್ರಮ ತೆಗೆದುಕೊಳ್ಳದಿರುವುದನ್ನು ಅವರು ಖಂಡಿಸಿದರು.

ದಲಿತರ ಮೇಲಿನ ಅನ್ಯಾಯ, ವರ್ಗಾವಣೆಯ ದಂಧೆಗಳಲ್ಲಿ ಸರ್ಕಾರ ತೊಡಗಿಕೊಂಡಿದೆ ಎಂದರು.

ಪ್ರತಿಭಟನಾಕಾರರು ಹಳೆ ಬಸ್‌ ನಿಲ್ದಾಣ ದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನೇತ್ರಾವತಿ ಮಂಜುನಾಥ್, ಬನ್ನಳ್ಳಿ ಪುನೀತ್, ಟಿ. ರಾಜಕುಮಾರ್, ಲೋಹಿತ್ ಕೌಡಹಳ್ಳಿ, ಹೆತ್ತೂರು ದೇವರಾಜ್, ಲೋಕೇಶ್, ಮೇಘ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು