ಚನ್ನರಾಯಪಟ್ಟಣ: ಬೂಕನ ಬೆಟ್ಟದಲ್ಲಿ ಜ.10 ರಿಂದ ಜ.21 ರವರೆಗೆ ನಡೆಯುವ ಶ್ರೀರಂಗನಾಥಸ್ವಾಮಿಯ ಜಾತ್ರೆಗೆ ಬರುವ ಜಾನುವಾರಗಳಿಗೆ ಮತ್ತು ಎತ್ತಿನ ಗಾಡಿಗೆ ಸುಂಕ ವಸೂಲಾತಿ ಇರುವುದಿಲ್ಲ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಬೂಕನಬೆಟ್ಟದಲ್ಲಿ ಏರ್ಪಡಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಉತ್ತಮ ಎತ್ತುಗಳಿಗೆ 2 ಗ್ರಾಂ ಚಿನ್ನವನ್ನು ಬಹುಮಾನವಾಗಿ ಕೊಡಲಾಗುವುದು ಎಂದರು.
ಸಭೆಯ ಪ್ರಾರಂಭದಲ್ಲಿ ಹಸುಗಳ ಸುಂಕವನ್ನು ಕೈ ಬಿಡುವಂತೆ ರೈತ ಮುಖಂಡರುಗಳು ಕೇಳಿದ್ದಾರೆ. ಇತರೆ ಸುಂಕಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ತಹಶೀಲ್ದಾರ್ ದಿನಾಂಕವನ್ನು ನಿಗದಿಪಡಿಸಿ ನಡೆಸುತ್ತಾರೆ ಎಂದು ತಿಳಿಸಿದರು.
ಮತಿಘಟ್ಟ ಪಂಚಾಯಿತಿ ವತಿಯಿಂದ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು, ಬೆಳಗೀಹಳ್ಳಿ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಮಾಡಬೇಕು ಎಂದರು.
ಗ್ರಾಮೀಣ ಕ್ರೀಡೆಗಳನ್ನು ಹಿರೀಸಾವೆ ಗ್ರಾಮ ಪಂಚಾಯಿತಿಯವರ ನೇತೃತ್ವದಲ್ಲಿ ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಕೃಷಿ ಮೇಳವನ್ನು ಆಯೋಜಿಸಬೇಕು. ಪಶು ಸಂಗೋಪನಾ ಮತ್ತು ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸೆಸ್ಕ್ ವತಿಯಿಂದ ತಾತ್ಕಾಲಿಕವಾಗಿ 63 ಕೆವಿ ವಿದ್ಯುತ್ ಪರಿವರ್ತಕವನ್ನು (ಟಿಸಿ) ಆಳವಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಪರವಾಗಿ ಎಚ್.ಎಸ್. ರವಿಕುಮಾರ್ ಹೆಗ್ಗಡಿಹಳ್ಳಿ ಕೃಷ್ಣಮೂರ್ತಿ, ಮತಿಘಟ್ಟ ನಾಗೇಶ್, ರಂಗಸ್ವಾಮಿ, ಜನಿವಾರ ಸಂತೋಷ್, ಬೊಮ್ಮೇನಹಳ್ಳಿ ಗಿರೀಶ್, ಸುಂಡಹಳ್ಳಿ ರವಿ, ಕೃಷಿ ಸಂದೀಪ್, ಬೂಕದ ರಾಶಿಗೌಡ ಮತ್ತಿತರರು ಮಾತನಾಡಿದರು.
ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ಉಪ ತಹಶೀಲ್ದಾರ್ ರವಿ, ಪಿಎಲ್ ಡಿಬಿ ಅಧ್ಯಕ್ಷ ಬಿ.ಎಂ. ಮುಂಜುನಾಥ್. ಕೆಡಿಪಿ ನಾಮನಿರ್ದೇಶಿತ ಸದಸ್ಯ ಯೋಗೇಶ್, ಕೃಷಿ ಪತ್ತಿನ ಸಹಾರ ಸಂಘದ ಅಧ್ಯಕ್ಷ ಮಹೇಶ್, ಮುಖಂಡರಾದ ಎಚ್.ಜಿ. ರಾಮಕೃಷ್ಣ, ಎಚ್.ಎಂ. ರಘು ದೇವಸ್ಥಾನದ ಪಾರುಪತ್ತೇದಾರ ರಂಗರಾಜ್, ಆರ್ ಐ ಯೋಗೇಶ್ ಸೇರಿದಂತೆ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರು ಸಭೆಯಲ್ಲಿ ಭಾಗವಹಿಸಿದ್ದರು.
MLA C.N. Balakrishna said that there will be no toll collection for cattle and bullock carts coming to the Sri Ranganathaswamy fair to be held at Bookana Betta from January 10 to January 21.










