ಚನ್ನರಾಯಪಟ್ಟಣ: ತೋಟಿಕೆರೆ ಏತನೀರಾವರಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದ್ದು ಪೂರ್ಣಗೊಂಡ ಬಳಿಕ ಹೆಬ್ಬಾಳಲು ಗ್ರಾಮ ಸೇರಿದಂತೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹೆಬ್ಬಾಳಲು ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯಿತಿ ರಾಜ್ ಇಲಾಖೆ ವತಿಯಿಂದ 80 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಲಕ್ಷ್ಮಿಪುರ ಗ್ರಾಮಸ್ಥರು ಹೆಬ್ಬಾಳಲು ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಲಕ್ಷ್ಮಿಪುರ ಹಾಗೂ ಹೆಬ್ಬಾಳಲು ಗ್ರಾಮದಲ್ಲಿ ರಸ್ತೆ, ಬಾಕ್ಸ್ ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಹೆಬ್ಬಾಳಲು ಗ್ರಾಮದಲ್ಲಿ ಗ್ರಾಮದ ಕೆರೆ ಏರಿ ದುರಸ್ತಿ ಸೇರಿದಂತೆ ದೇವಾಲಯಗಳ ಜೀರ್ಣೋದ್ಧಾರ, ಸರ್ಕಾರಿ ಶಾಲೆಗೆ ಹೆಚ್ಚುವರಿ ಹೊಸ ಕಟ್ಟಡ ಸೇರಿದಂತೆ ರಸ್ತೆ ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು .
ಮುಂಬರುವ ಆರ್ಥಿಕ ವರ್ಷದಲ್ಲಿ ಗ್ರಾಮದಿಂದ ಹನುಮಂತಪುರ ಗ್ರಾಮದ ವರೆಗಿನ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಉದ್ಯಮಿ ಅಣತಿ ಯೋಗೇಶ್, ಕೃಷಿ ಪತ್ತಿನ ಅಧ್ಯಕ್ಷರಾದ ವಿಕ್ಟರ್, ಮಧು, ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ದೊರೆಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ಗೌಡಪ್ಪ, ಹೆಬ್ಬಾಳಲು ಪ್ರಕಾಶ್, ವೆಂಕಟೇಶ್, ಶಿವರಾಜ್ ಅಣ್ಣ, ರಮೇಶ್, ಇಂಜಿನಿಯರ್ ಪ್ರೀತಮ್ ಸೇರಿದಂತೆ ಇತರರು ಹಾಜರಿದ್ದರು.










