ಚನ್ನರಾಯಪಟ್ಟಣ: ಐತಿಹಾಸಿಕ ತಾಣದಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಹಾಗೂ ಶ್ರೀ ಸದಾಶಿವಸ್ವಾಮಿ ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕವನ್ನು ಅಳವಡಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣರು ಹೇಳಿದರು.
ತಾಲೂಕಿನ ನುಗ್ಗೆಹಳ್ಳಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಪ್ರಮುಖ 03 ರಸ್ತೆಗಳಲ್ಲಿ ಅಳವಡಿಸಲಾಗಿದ್ದ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದರು.
ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಹಾಗೂ ಶ್ರೀ ಸದಾಶಿವ ಸ್ವಾಮಿ ದೇವಾಲಯಗಳು ಹೊಯ್ಸಳರ ಶಿಲ್ಪ ಕಲೆಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಂದಲೂ ದಿನನಿತ್ಯ ನೂರಾರು ಪ್ರವಾಸಿಗರು ಹಾಗೂ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.
ಇದುವರೆಗೂ ದೇವಾಲಯ ಮಾರ್ಗ ಸೂಚಿಸುವ ನಾಮಫಲಕ ಇರಲಿಲ್ಲ. ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ನಾಮ ಫಲಕವನ್ನು ಅಳವಡಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಪ್ರವಾಸಿಗರು ಹಾಗೂ ಭಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ದೇವಾಲಯದ ನಾಮಫಲಕದ ಜೊತೆಗೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳ ಹೆಸರು ಮತ್ತು ಕಿಲೋಮೀಟರ್ ಅನ್ನು ನಾಮಪಲಕದಲ್ಲಿ ಅಳವಡಿಸಿರುವುದು. ಈ ಭಾಗದಲ್ಲಿ ಓಡಾಡುವ ವಾಹನ ಸವಾರರಿಗೆ ಮಾಹಿತಿ ತಿಳಿಯಲಿದೆ ಎಂದರು.
ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಮತ್ತು ಸದಾಶಿವ ಸ್ವಾಮಿ ದೇವಾಲಯಗಳ ಮಾರ್ಗದ ರಸ್ತೆ ಸಂಪೂರ್ಣ ಆಳಾಗಿದ್ದು ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಮನವಿ ಮಾಡುವ ಮೂಲಕ ರಸ್ತೆ ಅಭಿವೃದ್ಧಿ ಜೊತೆಗೆ ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೇಗೌಡ, ಉದ್ಯಮಿ ಅಣತಿ ಯೋಗೇಶ್, ಗ್ರಾಪಂ ಸದಸ್ಯರಾದ ನಟರಾಜ್ ಯಾದವ್, ಎನ್ ಎಸ್ ಮಂಜುನಾಥ್, ಶಿವಕುಮಾರ್, ಮುಖಂಡರಾದ ದೊರೆಸ್ವಾಮಿ, ಮುರಳಿ, ಬಸವನಪುರ ಪ್ರಕಾಶ್, ಹುಲಿಕೆರೆ ಸಂಪತ್ ಕುಮಾರ್, ಜೈ ಕೀರ್ತಿ, ಮಧು, ಚಂದ್ರು ಯಾದವ್, ಜೆಸಿಬಿ ಶೇಖರ್, ಸೇರಿದಂತೆ ಇತರರು ಹಾಜರಿದ್ದರು.










