ಬೆಂಗಳೂರು: ⚠️ ಎಚ್ಚರಿಕೆ! ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಂಗಾತಿ ಹುಡುಕುವ ಮುನ್ನ ಎಚ್ಚರ! ಹೆಂಡತಿಯನ್ನು ‘ಅಕ್ಕ’ ಎಂದು ಪರಿಚಯಿಸಿದ ವರ- ಮದುವೆ ಆಮಿಷವೊಡ್ಡಿ ಸಾಫ್ಟ್‌ವೇರ್ ಇಂಜಿನಿಯರ್ ರಿಂದ ₹1.75 ಕೋಟಿ ದೋಚಿದ!

ಬೆಂಗಳೂರು:ತನ್ನ ಹೆಂಡತಿಯನ್ನು ಅಕ್ಕ ಎಂದು ಪರಿಚಯಿಸಿಕೊಂಡು ಮತ್ತೊಬ್ಬ ಯುವತಿಗೆ ಮದುವೆ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ, ಒಂದೇ ಕುಟುಂಬದ ಮೂವರು ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ವಿಜಯ್ ರಾಜ್ ಗೌಡ, ಬೋರೆಗೌಡ ಹಾಗೂ ಸೌಮ್ಯ ಎಂದು ಗುರುತಿಸಲಾಗಿದೆ. ಪ್ರಕರಣವನ್ನು ಮೊದಲು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮ್ಯಾಟ್ರಿಮೋನಿ ಮೂಲಕ ಪರಿಚಯ

ಪೊಲೀಸರ ಪ್ರಕಾರ, 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಯುವತಿ ಮತ್ತು ವಿಜಯ್ ರಾಜ್ ಗೌಡ ಪರಿಚಯಗೊಂಡಿದ್ದರು. ತನ್ನನ್ನು ದೊಡ್ಡ ಉದ್ಯಮಿ ಎಂದು ಪರಿಚಯಿಸಿಕೊಂಡ ಆರೋಪಿ, 715 ಕೋಟಿ ರೂಪಾಯಿ ಆಸ್ತಿ ಇದೆ ಎಂದು ನಂಬಿಸಿದ್ದಾನೆ. ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ತನ್ನ ಕುಟುಂಬದವರಿಗೂ ಪರಿಚಯ ಮಾಡಿಸಿದ್ದಾನೆ.

ಕೆಂಗೇರಿ ಸಮೀಪ ಯುವತಿಯನ್ನು ಕರೆಸಿ ಮನೆಯವರ ಪರಿಚಯ ಮಾಡಿಕೊಟ್ಟಿದ್ದ ಆರೋಪಿ, ಆಸ್ತಿ ಸಂಬಂಧಿತವಾಗಿ ಇಡಿ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣಗಳಿವೆ, ಖಾತೆಗಳು ತಾತ್ಕಾಲಿಕವಾಗಿ ಫ್ರೀಜ್ ಆಗಿವೆ ಎಂದು ಹೇಳಿ ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ತೋರಿಸಿ ನಂಬಿಕೆ ಗಳಿಸಿದ್ದಾನೆ.

ಹಂತಹಂತವಾಗಿ ಹಣ ವಸೂಲಿ

ಮೊದಲು ತುರ್ತು ಅಗತ್ಯವಿದೆ ಎಂದು ₹15 ಸಾವಿರ ಪಡೆದ ಆರೋಪಿ, ನಂತರ ಒಟ್ಟಿಗೆ ವ್ಯವಹಾರ ಮಾಡೋಣ ಎಂದು ಯುವತಿಯ ಹೆಸರಲ್ಲಿ ಲೋನ್ ಮಾಡಿಸಿದ್ದಾನೆ. ಅಲ್ಲದೆ, ಯುವತಿಯ ಸ್ನೇಹಿತರು ಹಾಗೂ ಸಂಬಂಧಿಗಳಿಂದಲೂ ಸಾಲ ಮಾಡಿಸಿ ಹಣ ಪಡೆದುಕೊಂಡಿದ್ದಾನೆ.

ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಹೇಳಿ ಮತ್ತಷ್ಟು ಹಣ ಪಡೆದಿದ್ದು, ಮತ್ತೆ ಮತ್ತೆ ಬ್ಯುಸಿನೆಸ್ ನೆಪದಲ್ಲಿ ಯುವತಿಯ ಸ್ನೇಹಿತರಿಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಸಿದ್ದಾನೆ. ಈ ರೀತಿ ಹಂತ ಹಂತವಾಗಿ ಒಟ್ಟು ₹1.75 ಕೋಟಿ ಹಣ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅಸಲಿ ಸತ್ಯ ಬಯಲು

ಹಣ ವಾಪಸ್ ಕೇಳಿದಾಗ ಆರೋಪಿ ಕೇವಲ ₹22 ಲಕ್ಷ ಮರಳಿಸಿ ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಬಳಿಕ ಹಣ ಕೇಳಿದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾನೆ.

ಹಣ ವಾಪಸ್ ಕೇಳಲು ಆರೋಪಿ ಮನೆಗೆ ತೆರಳಿದಾಗಲೇ, ಅವನು ಈಗಾಗಲೇ ಮದುವೆಯಾಗಿ ಮಗು ಇದ್ದ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಯುವತಿಗೆ ಪರಿಚಯಿಸಿದ ಮಹಿಳೆಯನ್ನು ತನ್ನ ಹೆಂಡತಿಯಾಗಿದ್ದು, ಆಕೆಯನ್ನು ‘ಅಕ್ಕ’ ಎಂದು ಪರಿಚಯಿಸಿದ್ದಾನೆ ಎಂಬುದು ಗೊತ್ತಾಗಿದೆ.

ತನಿಖೆ ಆರಂಭ

ತಾನು ಮೋಸ ಹೋಗಿರುವುದನ್ನು ಅರಿತ ಯುವತಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಕೆಂಗೇರಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಕೆಂಗೇರಿ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.