ಹಾಸನ: ಎಂಸಿಇ ಹಳೆಯ ವಿದ್ಯಾರ್ಥಿ, ದಾನಿ ಡಾ. ಹ್ಯಾರಿ ಮೋರಿಸ್ ನಿಧನ

Malenadu Technical College alumnus and philanthropist Dr. Harry Morris passed away on Friday.

ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗು ದಾನಿ ಡಾ. ಹ್ಯಾರಿ ಮೋರಿಸ್‌‍ ಶುಕ್ರವಾರ ನಿಧನರಾದರು.

1976ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ಅವರು ಯುಎಇ ಮೂಲದ ಫ್ಯಾಬ್‌ಟೆಕ್‌ ಗ್ರೂಪ್‌ ಆಫ್‌ ಕಂಪನಿ ಚೇರ್ಮನ್‌ ಹಾಗು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಎಂಸಿಇ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಡಾ. ಮೋರಿಸ್‌‍ ಅವರಿಗೆ ನಿರ್ವಹಣೆ ಮತ್ತು ಸಂಸ್ಥಾಪನಾ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಅನುಭವವಿತ್ತು.

ನಿಖರತೆ, ಶಿಸ್ತು ಮತ್ತು ದೂರದೃಷ್ಟಿ ಅವರನ್ನು ಫ್ಯಾಬ್‌ಟೆಕ್‌ ಅನ್ನು ಮಧ್ಯಪ್ರಾಚ್ಯದ ಇಂಜಿನಿಯರಿಂಗ್‌ ಮತ್ತು ಕಾನ್‌ಟ್ರಾಕ್ಟಿಂಗ್‌ ಕ್ಷೇತ್ರದ ಪ್ರಮುಖ ಸಂಸ್ಥೆಯನ್ನಾಗಿ ರೂಪಿಸಿತ್ತು.

ಅವರ ನೇತೃತ್ವದಲ್ಲಿ 40ಕ್ಕೂ ಹೆಚ್ಚಿನ ಕಂಪನಿಗಳನ್ನು ಒಳಗೊಂಡಿರುವ ಫ್ಯಾಬ್‌ಟೆಕ್‌ ಗ್ರೂಪ್‌ ಜಾಗತಿಕ ಮಟ್ಟದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದೆ.
ಎಂಸಿಇ ಕಾಲೇಜಿನ ಸಭಾ ಭವನ ನಿರ್ಮಾಣಕ್ಕೆ ಅವರು 1.50 ಕೋಟಿ ರೂ. ದೇಣಿಗೆ ನೀಡಿದ್ದು ವಿದ್ಯೆ ಕಲಿಸಿದ ಸಂಸ್ಥೆಗೆ ಗೌರವ ಸೂಚಿಸಿದ್ದನ್ನು ಸ್ಮರಿಸಬಹುದು.

ಡಾ. ಮೋರಿಸ್‌‍ ಅವರ ನಿಧನಕ್ಕೆ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್‌.ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಚೌಡಳ್ಳಿ ಜಗದೀಶ್‌, ಖಜಾಂಚಿ ಹೆಚ್‌.ಡಿ.ಪಾರ್ಶ್ವನಾಥ್‌ ಸಂತಾಪ ಸೂಚಿಸಿದ್ದಾರೆ. ಡಾ. ಹ್ಯಾರಿ ಮೋರಿಸ್‌‍ ಅವರ ನಿಧನಕ್ಕೆ ಪ್ರಭಾರ ಪ್ರಾಂಶುಪಾಲ ಡಾ. ಹೆಚ್‌.ಎಸ್‌‍. ನರಸಿಂಹನ್‌ ಹಾಗು ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು.