ಮಹಾರಾಷ್ಟ್ರ :ಬಾರಾಮತಿಯಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಚಾರ್ಟೆಡ್ ವಿಮಾನ ಅಪಘಾತ – ಕಾರಣ ಏನು?

ಮಹಾರಾಷ್ಟ್ರ : ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಚಾರ್ಟೆಡ್ ವಿಮಾನ ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದೆ.

ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ವಿಮಾನ ತಯಾರಕ ಬಾಂಬಾರ್ಡಿಯರ್ ಕಂಪನಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ವಿಮಾನವು ಏಕೆ ತುರ್ತು ಲ್ಯಾಂಡಿಂಗ್‌ಗೆ ಯತ್ನಿಸಿತು ಎಂಬ ಪ್ರಶ್ನೆ ಮೂಡಿದೆ.

ದಟ್ಟ ಮಂಜು, ಕುಸಿದ ಗೋಚರತೆ ಅಪಘಾತಕ್ಕೆ ಕಾರಣ?

ಪುಣೆ ಜಿಲ್ಲೆ ಹಾಗೂ ಬಾರಾಮತಿ ಪ್ರದೇಶದಲ್ಲಿ ಭಾರೀ ಮಂಜು ಆವರಿಸಿಕೊಂಡಿದ್ದರಿಂದ ಗೋಚರತೆ ಮಟ್ಟವು ತೀವ್ರವಾಗಿ ಕುಸಿದಿತ್ತು (Low Visibility Level). ಇದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ. ದಟ್ಟ ಮಂಜು ವಿಮಾನವು ತನ್ನ ಹಾದಿಯನ್ನು ಸರಿಯಾಗಿ ಕಾಯ್ದುಕೊಳ್ಳಲು ಅಡ್ಡಿಯಾಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಹಾರಾಟದ ವೇಳೆ ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

VSR ಸಂಸ್ಥೆ ನಿರ್ವಹಿಸುತ್ತಿದ್ದ VT-SSK ನೋಂದಣಿಯ ಲಿಯರ್‌ಜೆಟ್ 45 ವಿಮಾನವು ಬಾರಾಮತಿಯಲ್ಲಿ ಇಳಿಯುವ ಸಂದರ್ಭದಲ್ಲಿ ಪತನಗೊಂಡಿದೆ. ಆರರಿಂದ ಎಂಟು ಆಸನ ಸಾಮರ್ಥ್ಯ ಹೊಂದಿರುವ ಈ ಜೆಟ್ ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿದ್ದು, ಬೆಳಿಗ್ಗೆ 9.12ಕ್ಕೆ ಅಪಘಾತದ ಮಾಹಿತಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಲಭಿಸಿದೆ.

ಅಪಘಾತದ ಮಾಹಿತಿ ದೊರಕುತ್ತಿದ್ದಂತೆಯೇ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಅವಶೇಷಗಳಿಂದ ಹೊಗೆ ಏರುತ್ತಿರುವ ದೃಶ್ಯಗಳು ಸ್ಥಳದಿಂದ ಲಭ್ಯವಾಗಿವೆ. ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದ ವೇಳೆ, ಬಾರಾಮತಿಯಲ್ಲಿನ ದುಃಖಿತ ಸ್ಥಳೀಯರ ದೃಶ್ಯಗಳು ಮನಕಲಕುವಂತಿವೆ.

ಅಪಘಾತದ ಬಳಿಕ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಕೆಲವು ಭಾಗಗಳು ಸುತ್ತಮುತ್ತಲ ಪ್ರದೇಶಗಳಲ್ಲಿ ಚದುರಿರುವುದು ಕಂಡುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.