ಅರಸೀಕೆರೆ Aug.13,2026 (kannadapost.com): : ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವೆಂದೇ ಜನಮನದಲ್ಲಿ ಗುರುತಿಸಿಕೊಂಡಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಆಷಾಢ ಮಾಸದ ಕೊನೆಯ ಭೀಮನ ಅಮಾವಾಸ್ಯೆ ಅಂಗವಾಗಿ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅರಸೀಕೆರೆ ತಾಲ್ಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಮಹಾಸಂಸ್ಥಾನದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆಯಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ಅಮಾವಾಸ್ಯೆಯಂದು ಜಗನ್ಮಾತೆ ಅಮ್ಮನವರಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆ ಭೀಮನ ಅಮಾವಾಸ್ಯೆಯಂದೂ ವಿಶೇಷ ಪೂಜೆ ಹಾಗೂ ಪಾದಪೂಜೆ ನೆರವೇರಿಸಲಾಯಿತು.
🌺 ವಿಶೇಷ ಅಲಂಕಾರ
ಪೂಜೆಯ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ, ಬಾಳೆಕಂದುಗಳು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಅಲಂಕಾರದಿಂದ ದೇವಾಲಯದ ಆವರಣ ಭಕ್ತರ ಕಣ್ಮನ ಸೆಳೆಯಿತು.
ಸಂಜೆ 8 ಗಂಟೆಗೆ ಸುಕ್ಷೇತ್ರ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯಮೂರ್ತಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಹಾಗೂ ಅಮ್ಮನವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
🙏 ಗುರು ಇದ್ದಾಗ ಬದುಕು ಸಮೃದ್ಧ
ನಂತರ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಚೇತನ್ ಮರಿದೇವರು, ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಗುರು ಇರಬೇಕು. ಗುರುವಿನ ಮಾರ್ಗದರ್ಶನದಲ್ಲಿ ಉತ್ತಮ ಅರಿವು ಹಾಗೂ ಆಚಾರವನ್ನು ಬೆಳೆಸಿಕೊಂಡು ಗುರಿಯತ್ತ ಸಾಗಬೇಕು ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ಹಣ ಗಳಿಕೆ, ಕೀರ್ತಿ ಹಾಗೂ ಜೀವನದ ಜಂಜಾಟದ ನಡುವೆ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮವೇ ಆಶಾಕಿರಣ ಎಂದು ಅವರು ಹೇಳಿದರು.
🍚 ಭಕ್ತರಿಗೆ ದಾಸೋಹ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀಮತಿ ನೀಲಮ್ಮ ಶಂಕರಪ್ಪ ಮತ್ತು ಮಕ್ಕಳು, ದುಮೇನಹಳ್ಳಿ ಹಾಗೂ ಷಡಕ್ಷರಪ್ಪ ಮತ್ತು ಮಕ್ಕಳು, ಹುಣಸೆಕಟ್ಟಿ ಅವರ ವತಿಯಿಂದ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ, ಕೊಪ್ಪಲು, ಎರೇಹಳ್ಳಿ, ವೈಜಿಹಳ್ಳಿ, ಪಿ. ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕೆ. ಶಂಕರನಹಳ್ಳಿ, ಕಡಲಮಗ, ಡಿ.ಎಂ. ಕುರ್ಕೆ, ಶಶಿವಾಳ, ಹಾರನಹಳ್ಳಿ ಹಾಗೂ ಅಣ್ಣನಾಯಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.












