ಸಕಲೇಶಪುರ: ಬಸ್ ಹತ್ತುವಾಗ ಗೊಂದಲ-ತಾಯಿಯಿಂದ ಬೇರ್ಪಟ್ಟ ಬಾಲಕಿ: ಅಳುತ್ತಾ ಅಪ್ಪಿ ಮುದ್ದಾಡಿದ ಅಮ್ಮ-ಮಗಳ‌ ಮಿಲನದ ಹೃದಯಸ್ಪರ್ಶಿ ಕ್ಷಣ!

Sakleshpur: Here is the story of a girl who was separated from her mother while boarding a replacement bus that broke down on the way. Thanks to the timely efforts of the bus driver, conductor, locals, and the police, she was safely reunited with her mother.

ಸಕಲೇಶಪುರ: ದಾರಿಮಧ್ಯ ಕೆಟ್ಟು ನಿಂತ ಬಸ್ ಗೆ ಬದಲಾಗಿ ಬಂದ ಬಸ್ ಹತ್ತುವಾಗ ತಾಯಿಯಿಂದ ಬೇರ್ಪಟ್ಟಿದ್ದ ಬಾಲಕಿಯೊಬ್ಬಳು ಬಸ್ ಚಾಲಕ, ನಿರ್ವಾಹಕ, ಸ್ಥಳೀಯರು ಹಾಗೂ ಪೊಲೀಸರ ಸಕಾಲಿಕ ಪ್ರಯತ್ನದಿಂದ ಸುರಕ್ಷಿತವಾಗಿ ಮರಳಿ ತಾಯಿಯನ್ನು ಸೇರಿದ ಕತೆ ಇಲ್ಲಿದೆ.

ಧರ್ಮಸ್ಥಳ ಯಾತ್ರೆಗೆ ಬಸ್ ನಲ್ಲಿ ಹೊರಟಿದ್ದ ಬಾಲಕಿ ಮಂಗಳವಾರ ರಾತ್ರಿ ತಾಯಿಯಿಂದ ಆಕಸ್ಮಿಕವಾಗಿ ಬೇರ್ಪಟ್ಟಿದ್ದಳು. ಕೋಲಾರದ ಆ ಬಾಲಕಿ ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಬಳಿ ಸುರಕ್ಷಿತವಾಗಿ ಪತ್ತೆಯಾಗಿ ಮರಳಿ ಕುಟುಂಬವನ್ನು ಸೇರಿದ್ದಾಳೆ.

ಬಾಗೆ ಗ್ರಾಮದ ಬಳಿ ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ KSRTC ಬಸ್ ತಾಂತ್ರಿಕ ದೋಷದಿಂದ ನಿಂತಿತ್ತು. ಈ ವೇಳೆ ಬಸ್‌ನಲ್ಲಿದ್ದ ಸುಮಾರು ಆರು ಮಂದಿ ಪ್ರಯಾಣಿಕರನ್ನು ಮತ್ತೊಂದು ಬಸ್ಸಿಗೆ ಹತ್ತಿಸಿ ಕಳಿಸಲಾಯಿತು. ಆದರೆ ಬಾಲಕಿ ಮಾತ್ರ ತಪ್ಪಾಗಿ ಕೆಟ್ಟು ನಿಂತಿದ್ದ ಬಸ್ಸನ್ನೇ ಹತ್ತಿದ್ದಾಳೆ. ಇತ್ತ ತಾಯಿ ಹಾಗೂ ಇತರರು ಬೇರೆ ಬಸ್ಸಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.

ಕೆಟ್ಟು ನಿಂತಿದ್ದ ಬಸ್ ದುರಸ್ತಿಯಾದ ನಂತರ ಬೆಂಗಳೂರು ಕಡೆಗೆ ಹೊರಟಾಗ, ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ ಸಹಪ್ರಯಾಣಿಕರು ತಕ್ಷಣ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್ಐ ಪ್ರಸನ್ನ ಅವರು ಬಾಲಕಿಯ ಹೇಳಿಕೆ ಪಡೆದು, ಆಕೆ ಕೋಲಾರ ಜಿಲ್ಲೆಯ ಹಳ್ಳಿಯೊಂದರ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಎಂದು ಗುರುತಿಸಿದರು.

ಬಾಲಕಿಯ ಬಳಿ ಇದ್ದ ಮಾಹಿತಿಯ ಆಧಾರದಲ್ಲಿ ತಾಯಿಯ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕಿಸಿದಾಗ, ಅವರು ಬಾಲಕಿ ಹುಡುಕಿಕೊಂಡು ಹೊರಟು ಹಾಸನ ಸಮೀಪದಲ್ಲಿರುವುದು ತಿಳಿದುಬಂದಿತು. ನಂತರ ಬಾಲಕಿಯನ್ನು ಸುರಕ್ಷಿತವಾಗಿ ಬಾಳ್ಳುಪೇಟೆಯ ನೈವೇದ್ಯಂ ಹೋಟೆಲ್ ಸಮೀಪ ಬಸ್ ನಿಂದ ಇಳಿಸಲಾಯಿತು. ತಾಯಿ ಮರಳಿ ಅಲ್ಲಿಗೆ ಬರುವವರೆಗೂ ಆತಂಕಗೊಳ್ಳದಂತೆ ಹೋಟೆಲ್ ಸಿಬ್ಬಂದಿ ತಿಂಡಿ–ತಿನಿಸು ನೀಡಿ ಆರೈಕೆ ಮಾಡಿದರು.

ಹಾಸನದಿಂದ ವಾಪಸ್ ಬಂದ ತಾಯಿ ಮಗಳನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟು ಬಾಚಿ ತಬ್ಬಿಕೊಂಡರು. ಬಾಲಕಿಯ ರಕ್ಷಣಾ ಕಾರ್ಯದಲ್ಲಿ ಬಾಳ್ಳುಪೇಟೆಯ ಕಿಶೋರ್ ಹಾಗೂ ಪ್ರವೀಣ್ ಅವರ ಸಹಕಾರವೂ ಮಹತ್ವವಾಗಿತ್ತು.

ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು, ಸಹಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನಿಂದ ಬಾಲಕಿ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Sakleshpur: Here is the story of a girl who was separated from her mother while boarding a replacement bus that broke down on the way. Thanks to the timely efforts of the bus driver, conductor, locals, and the police, she was safely reunited with her mother.