ಅರಸೀಕೆರೆ: ತಮ್ಮ ತಪೋಶಕ್ತಿಯಿಂದ ಮನುಕುಲಕ್ಕೆ ಬೆಳಕು ನೀಡಿದ ಸುಕ್ಷೇತ್ರ ಕೋಡಿಮಠದ ಮಹಾ ತಪಸ್ವಿಗಳು ಪೂಜ್ಯರಾದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಎಂದು ಕೋಡಿಮಠದ ಜಗದ್ಗುರು ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸ್ಮರಿಸಿದರು.
ಸುಕ್ಷೇತ್ರ ಕೋಡಿಮಠದ ಸಭಾಂಗಣದಲ್ಲಿ ನಡೆಯುತ್ತಿರುವ ಪೂಜ್ಯ ಶಿವಲಿಂಗ ಸ್ವಾಮೀಜಿ ಅವರ ಶ್ರಾವಣ ಮಾಸದ ಏಳನೇ ದಿನದ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು.
ಇಂದು ಆಧುನಿಕ ಜೀವನ ಶೈಲಿಯ ಹಣದ ವ್ಯಾಮೋಹಕ್ಕೆ ಒಳಗಾಗಿ ಮನುಷ್ಯ ಮನಃಶಾಂತಿಯನ್ನು ಕಳೆದು ಕೊಳ್ಳುತ್ತಿದ್ದಾನೆ. ಆದ್ದರಿಂದ ಮಾನವನಿಗೆ ಧಾರ್ಮಿಕ ಪುರಾಣ ಪ್ರವಚನಗಳು ನೆಮ್ಮದಿ ನೀಡುತ್ತವೆ.
ಕ್ಷೇತ್ರವು ತಪೋಶಕ್ತಿಯ ಭಂಡಾರವಾಗಿದ್ದು, ಶಿವಲಿಂಗಜ್ಜಯ್ಯ, ನೀಲಮ್ಮ ಅಜ್ಜಯ್ಯ ದೈವ ಪುರುಷರು, ಭಕ್ತರನ್ನು ಉದ್ಧರಿಸಲು ಈ ಧರೆಯಲ್ಲಿ ಅವತರಿಸಿ ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಲು ಶ್ರಮಿಸಿದ್ದಾರೆ.
ಕೋಡಿಮಠವು ಜಾತಿ, ಧರ್ಮ, ಬೇಧ ಭಾವ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯಾತೀತ ಮಠವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಶಾಂತಿ,ನೆಮ್ಮದಿ ಭಕ್ತಿ ಭಾವನೆಗಳು ಬೆಳೆಯುತ್ತವೆ.
ನಾಡ ಗುರು ಹಿರೇಮಠ ಬೆಳಗಾವಿ ಮೃತ್ಯುಂಜಯ ಸ್ವಾಮೀಜಿ, ಶಿವಲಿಂಗ ಮಹಾ ಸ್ವಾಮೀಜಿಯವರ ಪುರಾಣ ಪ್ರವಚನ ಪಠಿಸಿದರು.
ಕ್ಷೇತ್ರದ ಉತ್ತರಾಧಿಕಾರಿ ಚೇತನ್ ಮುರಿದೇವರು ಕುಮಾರಿ ಶಿವಾನಿ, ಗುರು ಮಲ್ಲಯ್ಯ, ಮಾಡಾಳು ಶಿವಲಿಂಗಪ್ಪ, ಎಂ.ಡಿ ಸೋಮಶೇಖರ್, ಲೋಕೇಶ್, ಕಟ್ನೆ ತಿಮ್ಮಯ್ಯ, ಕೋಡಿ ಮಠದ ಏಜೆಂಟ್ ಸಿ.ಮಹದೇವಪ್ಪ ಇತರರಿದ್ದರು.










