23 C
Munich
Home News ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಒಂದೇ ತಂತ್ರದಿಂದ ಸಿಕ್ಕಿಬಿದ್ದ ಆರೋಪಿಗಳು! 640 ನಿಮಿಷಗಳ ಬ್ಲ್ಯಾಕ್‌ಔಟ್, 2,004...

ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಒಂದೇ ತಂತ್ರದಿಂದ ಸಿಕ್ಕಿಬಿದ್ದ ಆರೋಪಿಗಳು! 640 ನಿಮಿಷಗಳ ಬ್ಲ್ಯಾಕ್‌ಔಟ್, 2,004 ಕರೆಗಳಿಂದ ಬಯಲಾಯ್ತು ರಹಸ್ಯ

ಲೋಹಗಢ್ ಕೋಟೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಬಯಲಾದ ಡಿಜಿಟಲ್ ಸಾಕ್ಷ್ಯಗಳು
ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ನಿಶ್ಚಿತಾರ್ಥವಾಗಿದ್ದ ಭಾವಿ ಪತಿಯನ್ನು ಕೋಟೆಯ ಮೇಲಿಂದ ತಳ್ಳಿ ಹತ್ಯೆ ಮಾಡಿದ ಆರೋಪದ ಮೇಲೆ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಎಂಬುವವರನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜೂನ್ 18 ರಂದು ಲೋನಾವಾಲಾ ಸಮೀಪದ ಲೋಹಗಢ್ ಕೋಟೆಯಲ್ಲಿ ನಡೆದ ಈ ಘಟನೆ ಆರಂಭದಲ್ಲಿ ಅಪಘಾತ ಎಂದು ಬಿಂಬಿತವಾಗಿತ್ತಾದರೂ, ಪೊಲೀಸರ ತನಿಖೆಯಿಂದಾಗಿ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದು ಸಾಬೀತಾಗಿದೆ.
ಈ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿಗಳು ಪೊಲೀಸರ ಹಾದಿ ತಪ್ಪಿಸಲು ನಡೆಸಿದ ಹರಸಾಹಸ ಹಾಗೂ ಅವರು ಸಿಕ್ಕಿಬಿದ್ದ ರೋಚಕ ವಿವರಗಳು ಹೀಗಿವೆ.

ತನಿಖೆಗೆ ದಾರಿ ಮಾಡಿಕೊಟ್ಟ 640 ನಿಮಿಷಗಳ ಬ್ಲ್ಯಾಕ್ ಔಟ್!

ಕೊಲೆ ನಡೆದ ಜೂನ್ 18 ರಂದು ಆರೋಪಿ ಚೇತನ್ ಚೌಧರಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5:40 ರವರೆಗೆ (ಅಂದರೆ ಸುಮಾರು 640 ನಿಮಿಷಗಳು) ಮೊಬೈಲ್ ಇಂಟರ್ನೆಟ್ ಆಫ್ ಮಾಡಿ ಸಂಪೂರ್ಣ ಆಫ್‌ಲೈನ್ ಆಗಿದ್ದ. ಪೊಲೀಸರು ತನ್ನ ಲೋಕೇಶನ್ ಟ್ರ್ಯಾಕ್ ಮಾಡಬಾರದು ಎಂಬ ಕಾರಣಕ್ಕೆ ತನ್ನ ಫೋನ್ ಅನ್ನು ಅಂಗಡಿಯಲ್ಲೇ ಬಿಟ್ಟು, ಕೆಲಸಗಾರನೊಬ್ಬನ ಫೋನ್ ತೆಗೆದುಕೊಂಡು ಹೋಗಿದ್ದ. ಆದರೆ, ಇಡೀ ಜಗತ್ತು ಡಿಜಿಟಲ್ ಆಗಿರುವಾಗ ಈತ ಸಡನ್ನಾಗಿ ಕಾಣೆಯಾಗಿದ್ದೇ ಪೊಲೀಸರಲ್ಲಿ ಮೊದಲ ಶಂಕೆ ಮೂಡಿಸಿತು. ಪೊಲೀಸರು ಆ ಸಮಯದಲ್ಲಿ ಚೇತನ್ ಫೋನ್‌ಗೆ ಬಂದ ಕರೆಗಳನ್ನು ಪರಿಶೀಲಿಸಿದಾಗ, ಕರೆ ಸ್ವೀಕರಿಸಿದವರೆಲ್ಲರೂ ಚೇತನ್ ಧ್ವನಿ ಕೇಳಿಲ್ಲ, ಬದಲಿಗೆ ಅವರ ಅಂಗಡಿ ಕೆಲಸಗಾರರು ಮಾತನಾಡಿದ್ದಾರೆ ಎಂದು ತಿಳಿಸಿದರು. ಇದರಿಂದ ಪೊಲೀಸರು ಕೆಲಸಗಾರನನ್ನು ವಿಚಾರಣೆಗೆ ಒಳಪಡಿಸಿದಾಗ ಚೇತನ್‌ನ ಪ್ಲಾನ್ ಪೂರ್ಣವಾಗಿ ಬಯಲಾಯಿತು.

ಸಿಡಿಆರ್‌ನಿಂದ ಬಯಲಾದ ಆರು ತಿಂಗಳ ರಹಸ್ಯ ಸಂಬಂಧ

ಲೋನಾವಾಲಾ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ದಿನೇಶ್ ತಾಯಡೆ ನೀಡಿರುವ ಮಾಹಿತಿ ಪ್ರಕಾರ, ಸಿಯಾ ಮತ್ತು ಚೇತನ್ ಅವರ ಕಾಲ್ ಡಿಟೇಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಇಬ್ಬರ ನಡುವಿನ ರಹಸ್ಯ ಸಂಬಂಧ ಬಯಲಾಗಿದೆ. ಜನವರಿ 1 ರಿಂದ ಜೂನ್ 18 ರ ನಡುವೆ ಇಬ್ಬರೂ ಬರೋಬ್ಬರಿ 2,004 ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ದಿನಕ್ಕೆ ಸರಾಸರಿ 8 ರಿಂದ 10 ಬಾರಿ ಇವರಿಬ್ಬರು ಸಂಪರ್ಕದಲ್ಲಿದ್ದು, ಕಳೆದ ಆರು ತಿಂಗಳಲ್ಲಿ ಇಬ್ಬರೂ ಒಟ್ಟು 238 ಗಂಟೆಗಳ ಕಾಲ ಮಾತನಾಡಿದ್ದಾರೆ. ಕೇತನ್ ಕೊಲೆಯಾದ ನಂತರವೂ ಇವರ ನಡುವೆ ಕರೆಗಳು ಮತ್ತು ಸಂದೇಶಗಳು ಮುಂದುವರಿದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಈ ಬಗ್ಗೆ ಮಾತನಾಡಿ, ಸಿಯಾ ಮತ್ತು ಆಕೆಯ ಪ್ರೇಮಿಯ ನಡುವಿನ ಚಾಟ್‌ಗಳು ಹಾಗೂ ಕಾಲ್ ರೆಕಾರ್ಡ್ಸ್ ವಶಪಡಿಸಿಕೊಳ್ಳಲಾಗಿದ್ದು ಮುಂದಿನ ವಿಶ್ಲೇಷಣೆ ನಡೆಯುತ್ತಿದೆ ಎಂದಿದ್ದಾರೆ.

ಮಧ್ಯಮ ಮಾರ್ಗ ಆರಿಸಿಕೊಂಡ ಸಿಯಾ!

ಸಿಯಾ ಮತ್ತು ಮೃತ ಕೇತನ್ ಅಗರ್ವಾಲ್ ಅವರಿಗೆ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿದ್ದು, ಇದೇ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಹಾಗಂತ ನಿಶ್ಚಿತಾರ್ಥ ಮುರಿದುಕೊಂಡು ಚೇತನ್ ಜೊತೆ ಓಡಿಹೋದರೆ ಕುಟುಂಬದ ಮರ್ಯಾದೆ ಹರಾಜಾಗುತ್ತದೆ ಎಂಬ ಭಯ ಆಕೆಗಿತ್ತು. ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಬರದಂತೆ, ಮದುವೆಯನ್ನೂ ತಪ್ಪಿಸಲು ಆಕೆ ಕಂಡುಕೊಂಡಿದ್ದೇ ಭಾವಿ ಪತಿಯ ಕೊಲೆಯೆಂಬ ಕ್ರೂರ ಮಧ್ಯಮ ಮಾರ್ಗ. ಇದಕ್ಕಾಗಿ ಇಬ್ಬರೂ ಮೊಬೈಲ್‌ನಲ್ಲಿ ಕೊಲೆ ಮಾಡುವುದು ಹೇಗೆ? ಎಂದು ಹಲವು ಕ್ರಿಮಿನಲ್ ವಿಧಾನಗಳನ್ನು ಸರ್ಚ್ ಮಾಡಿದ್ದರು. ಅಂತಿಮವಾಗಿ ಲೋಹಗಢ್ ಕೋಟೆಯನ್ನು ಆರಿಸಿಕೊಂಡ ಸಿಯಾ, ಕೇತನ್‌ನನ್ನು ಮತ್ತೆ ಮತ್ತೆ ಟ್ರೆಕ್ಕಿಂಗ್‌ಗೆ ಬರುವಂತೆ ಒತ್ತಾಯಿಸಿ ಅಲ್ಲಿಂದ ತಳ್ಳಿ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.

ಶವಸಂಸ್ಕಾರದ ವೇಳೆ ಸಿಯಾ ವರ್ತನೆ ನೋಡಿ ಸಂಶಯ ಪಟ್ಟ ಕುಟುಂಬ!

ಮೃತ ಕೇತನ್ ತಂದೆ ವಿಶಾಲ್ ಅಗರ್ವಾಲ್ ಪ್ರಕಾರ, ಕೊಲೆಯ ನಂತರ ಸಿಯಾ ನಡೆದುಕೊಂಡ ರೀತಿ ಅವರಲ್ಲಿ ಅನುಮಾನ ಮೂಡಿಸಿತು. ಎಲ್ಲರೂ ಆಘಾತದಲ್ಲಿದ್ದಾಗ ಸಿಯಾ ಮಾತ್ರ ತೀರಾ ಸಾಮಾನ್ಯದವಳಂತೆ ಇದ್ದಳು. ಅಪಘಾತ ನಡೆದ ಜಾಗದಲ್ಲಿ ಪೊಲೀಸರೊಂದಿಗೆ ಹರಟೆ ಹೊಡೆಯುತ್ತಾ, ಮುಂದಿನ ಕಾನೂನು ಪ್ರಕ್ರಿಯೆಗಳೇನು ಎಂದು ವಿಚಾರಿಸುತ್ತಿದ್ದಳು. ಬಹುಶಃ ಆಕೆ ಮುಂದಿನ ನಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು ಎಂದು ವಿಶಾಲ್ ಅಗರ್ವಾಲ್ ಆರೋಪಿಸಿದ್ದಾರೆ.
error: Content is protected !!