ಕೇರಳ : ಚಿತ್ರರಂಗ ಎಷ್ಟು ಪ್ರೀತಿ ನೀಡುತ್ತದೆಯೋ ಅಷ್ಟೇ ದ್ವೇಷವನ್ನೂ ನೀಡುವ ಜಾಗ. ಇಲ್ಲಿ ಲುಕ್ಗೆ ಅಪಾರ ಪ್ರಾಮುಖ್ಯತೆ ಇರುವುದರಿಂದ ನಟ–ನಟಿಯರ ದೇಹದಲ್ಲಿ ಸ್ವಲ್ಪ ಬದಲಾವಣೆ ಕಂಡರೂ ಅದೇ ದೊಡ್ಡ ಚರ್ಚೆಗೆ ಕಾರಣವಾಗುತ್ತದೆ.
ಕೆಲವರು ಇಂತಹ ಟೀಕೆಗಳಿಗೆ ಅಂಜಿದರೆ, ಇನ್ನೂ ಕೆಲವರು ಧೈರ್ಯವಾಗಿ ಎದುರಿಸುತ್ತಾರೆ. ಇತ್ತೀಚೆಗೆ ಕನ್ನಡದ ‘ಮಿಲನ’ ಸಿನಿಮಾದ ಮೂಲಕ ಜನಪ್ರಿಯರಾಗಿದ್ದ ನಟಿ ಪಾರ್ವತಿ ಮೆನನ್ ಅವರಿಗೆ ಬಾಡಿ ಶೇಮಿಂಗ್ ಎದುರಾಗಿದೆ.
ಕೇರಳದ ಮೂಲದ ಪಾರ್ವತಿ ಮೆನನ್ ಅವರಿಗೆ ಈಗ 37 ವರ್ಷ. 17ನೇ ವಯಸ್ಸಿನಲ್ಲಿ, 2006ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, 2007ರಲ್ಲಿ ಬಿಡುಗಡೆಯಾದ ‘ಮಿಲನ’ ಸಿನಿಮಾದ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. ಪುನೀತ್ ರಾಜ್ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ಈ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಬಳಿಕ ‘ಪೃಥ್ವಿ’ ಸಿನಿಮಾದಲ್ಲಿ ಮತ್ತೆ ಪುನೀತ್ ಜೊತೆ ನಟಿಸಿ ಹಿಟ್ ಜೋಡಿಯಾಗಿ ಗುರುತಿಸಿಕೊಂಡರು.
ಆದರೆ ‘ಅಂದರ್ ಬಾಹರ್’ ಬಳಿಕ ಪಾರ್ವತಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ ಅವರು ಮಲಯಾಳಂ ಚಿತ್ರರಂಗದಲ್ಲಿ ಆಯ್ದ ಚಿತ್ರಗಳಲ್ಲಿ ನಟಿಸುತ್ತಿದ್ದು, ಚ್ಯೂಸಿ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತಿದ್ದಾರೆ. ಈ ನಡುವೆ ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದರ ಹಿನ್ನೆಲೆಯಲ್ಲಿ ಪಾರ್ವತಿ ಮೆನನ್ ಅವರ ದೇಹದಾಕಾರದ ಬಗ್ಗೆ ಕೇರಳಿಗರಿಂದಲೇ ಹೇಟ್ ಮೆಸೇಜ್ಗಳು ಹಾಗೂ ಬಾಡಿ ಶೇಮಿಂಗ್ ಟೀಕೆಗಳು ಕೇಳಿಬಂದಿವೆ.
ಮೊದಲಿಗಿಂತ ದಪ್ಪವಾಗಿದ್ದಾರೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾಗಿದ್ದು, ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ವಿಚಾರ ಹಿಡಿದು ನಟಿಯರ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಇದಕ್ಕೂ ಮೊದಲು ಕೂಡ ಪಾರ್ವತಿ ಮೆನನ್ ಇಂತಹ ಅನುಭವಗಳನ್ನು ಎದುರಿಸಿದ್ದ ಉದಾಹರಣೆಗಳಿದ್ದು, ಈ ಬಾರಿ ಕೂಡ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಕೆಲ ನಟಿಯರು ಈ ರೀತಿಯ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಉದಾಹರಣೆಗಳು ಚಿತ್ರರಂಗದಲ್ಲಿ ಈಗಾಗಲೇ ಕಂಡುಬಂದಿವೆ.










