ಬೆಂಗಳೂರು, ಫೆಬ್ರವರಿ,25,2026(www.kannadapost.com): ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಪದೇ ಪದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ G. Parameshwara ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕವಾಗಿ ಹಾದಿಬೀದಿಯಲ್ಲಿ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆಸುವುದು ಸರಿಯಲ್ಲ. ಏನೇ ವಿಷಯ ಇದ್ದರೂ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ‘ಕ್ಲೋಸ್ ಡೋರ್’ ಸಭೆಯಲ್ಲಿ ಚರ್ಚಿಸಬೇಕು ಎಂದು ಹೇಳಿದರು.
ಕೆಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ
ಅಧಿಕಾರ ಹಂಚಿಕೆ ಕುರಿತು K. N. Rajanna ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಅದರಲ್ಲೇನಾದರೂ ತಪ್ಪು ಇದೆಯೇ? ಆದರೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದಕ್ಕಿಂತ ಸಿಎಲ್‌ಪಿ ಸಭೆಯಲ್ಲಿ ಅಭಿಪ್ರಾಯ ಮಂಡಿಸಬೇಕು. ಬಳಿಕ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕು” ಎಂದರು.
“ನನ್ನ ಹೆಸರು ಕೂಗಿದರೆ ಸಿಎಂ ಆಗಲ್ಲ”
ಪರಮೇಶ್ವರ್ ಮುಂದಿನ ಸಿಎಂ ಎಂಬ ಬೆಂಬಲಿಗರ ಘೋಷಣೆ ಕುರಿತು ಮಾತನಾಡಿದ ಅವರು, “ನನ್ನ ಹೆಸರು ಕೂಗಿದ ತಕ್ಷಣ ಸಿಎಂ ಆಗುವುದಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ದನಾಗಿದ್ದೇನೆ” ಎಂದು ಹೇಳಿದರು.
8 ವರ್ಷಗಳ ಕಾಲ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಸಾಮರ್ಥ್ಯ ಇಲ್ಲದೆ ಕೆಲಸ ಮಾಡಿದ್ದೀನಾ? ಎರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ನನ್ನ ಸಾಮರ್ಥ್ಯದ ಬಗ್ಗೆ ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ಸಿಎಂ ಸ್ಥಾನ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಪಕ್ಷದ ಹೈಕಮಾಂಡ್ ಕೈಯಲ್ಲಿದೆ. ಅನಗತ್ಯ ಚರ್ಚೆಗಳು ಪಕ್ಷಕ್ಕೆ ಹಾನಿ ಉಂಟುಮಾಡಬಹುದು ಎಂಬ ಸಂದೇಶವನ್ನು ಗೃಹ ಸಚಿವರು ನೀಡಿದರು.










