ಸೆ. ೨ರಂದು ಹಾಸನದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ

ಹೊಳೆನರಸೀಪುರ: ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆಯಿಂದ ಕನ್ನಡ ನಾಡು ನುಡಿ ಸಂಸ್ಕೃತಿಗೆ ಒದಗಿದ್ದ ಧಕ್ಕೆಯನ್ನು ಸರಿಪಡಿಸುವ ಸಲುವಾಗಿ ಆರಂಭಗೊಂಡ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಉದ್ದಗಲಕ್ಕು ಪಸರಿಸಿದ್ದು ತನ್ನದೇಯಾದ ಶಕ್ತಿಯನ್ನು ಉಳಿಸಿಕೊಂಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಹೇಳಿದರು.

ಪಟ್ಟಣದ ಹೇಮಾವತಿ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಗ್ರಾಮ ಮಟ್ಟದಲ್ಲೂ ಕರವೇ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರವೇ ಯಾವುದೇ ಜಾತಿ ಧರ್ಮಕ್ಕೆ ಅಂಟಿಕೊಂಡು ಬಂದಿಲ್ಲ, ಮುಖಂಡ ಟಿ.ಎ. ನಾರಾಯಣಗೌಡ ಅವರು ಚಾಲನೆ ನೀಡಿರುವ ಸಂಘಟನೆ ರಾಜ್ಯಾದ್ಯಂತ ಜನರ ಧ್ವನಿಯಾಗಿದೆ.

ತಾಲ್ಲೂಕು ಅಧ್ಯಕ್ಷ ಓಹಿಲೇಶ್ ಅವರು ಕರವೇಯನ್ನು ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಇದೀಗ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದ್ದಾರೆ. ಇಂದು ನಡೆಯುತ್ತಿರುವ ಸಭೆಯಲ್ಲಿ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲು ಸಭೆ ನಡೆಸುತ್ತಿದ್ದು ಗ್ರಾಮೀಣ ಪ್ರದೇಶಗಳಿಂದ ಆಗಮಿಸಿರುವ ಆಸಕ್ತರು ಕರವೇ ಸಂಘಟನೆಯನ್ನು ನಿಮ್ಮಗಳ ಗ್ರಾಮಗಳಲ್ಲಿ ಆರಂಭಿಸಿ ಕರವೇ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ಸೆ. ೨ ರಂದು ಜಿಲ್ಲಾ ಕೇಂದ್ರದಲ್ಲಿ ನಾರಾಯಣಗೌಡ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸದಸ್ಯರ ಸಭೆ ಕರೆಯಲಾಗಿದ್ದು ಸಭೆಗೆ ಎಲ್ಲರೂ ಆಗಮಿಸಬೇಕು. ಕರವೇ ನಾಯಕತ್ವ ವಹಿಸಿಕೊಂಡಿರುವ ನಮ್ಮ ನಾರಾಯಣಗೌಡರು ರಾಜ್ಯ ಹಲವಾರು ಕ್ಲಿಷ್ಟ ಸಮಸ್ಯೆಗಳನ್ನು ಹೋರಾಟದ ಮೂಲಕ ಪರಿಹರಿಸಿರುವ ಅನೇಕ ಉದಾಹರಣೆ ನೀಡಿದರು.