ಚನ್ನರಾಯಪಟ್ಟಣ: ಸಾವಯವ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ-ಕೆ. ಪುರಂದರ

K. Purandara, Project Officer, Shravanabelagola, Srikshetra Dharmasthala Rural Development Project, said that using more organic food items in the daily diet will lead to better health.

ಚನ್ನರಾಯಪಟ್ಟಣ: ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಾವಯವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸುವುದರಿಂದ ಉತ್ತಮ ಆರೋಗ್ಯ ಲಭಿಸಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರವಣಬೆಳಗೊಳ ಯೋಜನಾಧಿಕಾರಿ ಕೆ.ಪುರಂದರ ಹೇಳಿದರು.

ತಾಲ್ಲೂಕಿನ ವಿರುಪಾಕ್ಷಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ರೈತಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಯೋಜನೆ ವತಿಯಿಂದ ಜನರಲ್ಲಿ ಪರಿಸರ ಉಳಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ರೈತರು ಸಾವಯವ ಬೆಳೆಗಳನ್ನು ಬೆಳೆಯಲು ಪ್ರೇರೇಪಿಸುವ ನಿಟ್ಟಿನಲ್ಲಿ ರೈತಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಪೂಜ್ಯ ವೀರೇಂದ್ರ ಹೆಗಡೆಯವರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವು ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬರಲಾಗುತ್ತಿದೆ. ಕೃಷಿ, ಶಿಕ್ಷಣ, ದೇವಾಲಯ ಜೀರ್ಣೋದ್ಧಾರ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಯೋಜನೆಯ ಸಿರಿಧಾನ್ಯ ವಿಭಾಗದ ಅಧಿಕಾರಿ ಜಯರಾಮ್ ಮಾತನಾಡಿ, ಸಿರಿಧಾನ್ಯ ಬೇಸಾಯದ ಕ್ರಮ ಅದರಿಂದಾಗುವ ಉಪಯೋಗ ಔಷಧಿ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷ ನಾಗರಾಜು, ಯೋಜನೆಯ ಕೃಷಿ ಮೇಲ್ವಿಚಾರಕ ಟಿ.ಎಮ್.ಮಹದೇವಪ್ರಸಾದ್, ಸೇವ ಪ್ರತಿನಿಧಿ ಭಾಗ್ಯ, ಸಹಾಯ ಸಂಘಗಳ ಸಂಘದ ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.