ಸಕಲೇಶಪುರ: ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಖಾಸಗಿ ಕಾರ್ಯನಿಮಿತ್ತ ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಕುಟುಂಬದವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಅರ್ಚಕರಾದ ಸೋಮೇಶ್, ಮಂಜುನಾಥ್ ಪ್ರಸಾದ್, ಶ್ರೀಕಾಂತ್ ವಹಿಸಿದ್ದರು. ಪೂಜಾ ವಿಧಿ ವಿಧಾನಗಳು ಮುಗಿದ ನಂತರ ಸುಧಾ ಮೂರ್ತಿರವರು ಅರ್ಚಕ ಸೋಮೇಶ್ ರವರ ಮನೆಯಲ್ಲಿ ಲಘು ಉಪಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅವರು ಪಟ್ಟಣದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳು ಇದ್ದು ಮಲೆನಾಡಿನಲ್ಲಿ ವರ್ಷದ 6 ತಿಂಗಳು ಮಳೆ ಬರುವುದರಿಂದ ಕ್ರೀಡಾ ಪಟುಗಳ ಅಭ್ಯಾಸಕ್ಕೆ ಅವಕಾಶವಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ, ಅವರು ತಾವು ತಮ್ಮ ಶಾಸಕರ ಅನುದಾನದಲ್ಲೇ ನಿರ್ಮಾಣ ಮಾಡಬಹುದಲ್ಲ ಎಂದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ತಾಲೂಕುಗಳು ಹಾಗೂ ಹಾಸನ ತಾಲೂಕಿನ ಒಂದು ಹೋಬಳಿ ಬರುತ್ತದೆ. ಒಟ್ಟಾರೆಯಾಗಿ 127 ಕಿ. ಮೀ.ಗೂ ಹೆಚ್ಚಿನ ವಿಸ್ತೀರ್ಣವಿದೆ. ನನಗೆ ಬರುವ ಶಾಸಕರ ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದೇ ಕಷ್ಟಕರ, ಹೀಗಾಗಿ ತಾವು ಇತ್ತ ಗಮನಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಕಲೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಬ್ಯಾಕರವಳ್ಳಿ ಜಯಣ್ಣ, ನಂದಿಕೃಪ ರಾಜು, ಮೋಹನ್ ಆಚಾರ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಬಬಿತ ವಿಶ್ವನಾಥ್,ಬಿಜೆಪಿ ಮುಖಂಡರಾದ ಅಶ್ವಥ್, ಸುಧೀಶ್, ಅಗ್ನಿ ಸೋಮಶೇಖರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
Infosys CEO and Rajya Sabha member Sudha Murthy visited the town’s Swami temple for a private function and offered special prayers on behalf of her family.










