ಭಾರತ : ಭಾರತಕ್ಕೆ ಅಪಾಯಕಾರಿ ರೋಗದ ಹೊಸ ಆತಂಕ, ಚಿಕಿತ್ಸೆ–ಲಸಿಕೆ ಇನ್ನೂ ಇಲ್ಲ

ಭಾರತ : ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ದೃಢಪಟ್ಟಿರುವುದರಿಂದ ದೇಶದಾದ್ಯಂತ ಮಾತ್ರವಲ್ಲ, ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಆತಂಕ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳು ವರದಿಯಾಗುತ್ತಿದ್ದಂತೆ ಥೈಲ್ಯಾಂಡ್, ನೇಪಾಳ, ತೈವಾನ್ ಸೇರಿದಂತೆ ಅನೇಕ ದೇಶಗಳು ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಹಾಗೂ ಪ್ರಯಾಣಿಕರ ನಿಗಾವನ್ನು ಬಿಗಿಗೊಳಿಸಿವೆ.

40 ರಿಂದ 75 ಪ್ರತಿಶತದವರೆಗೆ ಮರಣ ಪ್ರಮಾಣ ಹೊಂದಿರುವ ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಇನ್ನೂ ಯಾವುದೇ ನಿರ್ಣಾಯಕ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಈ ಕಾರಣದಿಂದಲೇ ವಿಶ್ವ ಆರೋಗ್ಯ ಸಂಸ್ಥೆ (WHO) ನಿಪಾ ವೈರಸ್ ಅನ್ನು ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗಗಳ ಪಟ್ಟಿಯಲ್ಲಿ ಸೇರಿಸಿದೆ.

ನಿಪಾ ವೈರಸ್ ಪ್ರಕರಣ ದೃಢ

ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ, ಕೋಲ್ಕತ್ತಾ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಿಪಾ ವೈರಸ್ ಸೋಂಕಿನ ಪ್ರಕರಣ ದೃಢಪಟ್ಟಿದೆ. ಇದರ ಬೆನ್ನಲ್ಲೇ ತ್ವರಿತವಾಗಿ ಸಂಪರ್ಕ ಪತ್ತೆ ಕಾರ್ಯ ಆರಂಭಿಸಲಾಗಿದ್ದು, ಸುಮಾರು 100 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 180 ಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ ಸುಮಾರು 20 ಮಂದಿ ಹೆಚ್ಚಿನ ಅಪಾಯದ ವರ್ಗಕ್ಕೆ ಸೇರಿದ್ದಾರೆ.

ಪ್ರಾಣಿಜನ್ಯ ಕಾಯಿಲೆ

ನಿಪಾ ವೈರಸ್ ಪ್ರಾಣಿಜನ್ಯ ಕಾಯಿಲೆಯಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಹೆಣ್ಣು ಬಾವಲಿಗಳನ್ನು ಇದರ ನೈಸರ್ಗಿಕ ವಾಹಕರಾಗಿ ಪರಿಗಣಿಸಲಾಗಿದೆ. ಕಲುಷಿತ ಹಣ್ಣುಗಳು, ಆಹಾರ ಸೇವನೆ, ಸೋಂಕಿತ ಹಂದಿಗಳ ಸಂಪರ್ಕ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡುವ ಸಾಧ್ಯತೆ ಇದೆ.

ನಿಪಾ ವೈರಸ್‌ನ ಆರಂಭಿಕ ಲಕ್ಷಣಗಳು

ಜ್ವರ
ತಲೆನೋವು
ಮೈ ನೋವು
ವಾಂತಿ
ಗಂಟಲು ನೋವು
ಗಂಭೀರ ಸ್ಥಿತಿಯಲ್ಲಿ:
ಉಸಿರಾಟದ ತೊಂದರೆ
ನ್ಯುಮೋನಿಯಾ
ಪ್ರಜ್ಞೆ ತಪ್ಪುವುದು ಅಥವಾ ಗೊಂದಲ
ಮೆದುಳಿನ ಊತ (ಎನ್ಸೆಫಾಲಿಟಿಸ್)