ಬೇಲೂರು: ಜನ ಸ್ನೇಹಿ ಆಡಳಿತವನ್ನು ಜಾರಿಗೆ ತರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಗೃಹ ಇಲಾಖೆ ಮನೆ ಮನೆಗೆ ಪೊಲೀಸ್ ಎಂಬ ವಿನೂತವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಆರಕ್ಷಕ ನಿರೀಕ್ಷಕ ರೇವಣ್ಣ, ಆರಕ್ಷಕ ಉಪ ನಿರೀಕ್ಷಕ ಶಿವನಾಂದ ಪಾಟೀಲ್ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತ ಹೆಬ್ಬಾಳು ಹಾಲಪ್ಪ ಚಾಲನೆ ನೀಡಿದರು.
ಆರಕ್ಷಕ ನಿರೀಕ್ಷಕ ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರದ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದ್ದು, ಸಾರ್ವಜನಿಕರ ಕುಂದು ಕೊರತೆಗಳನ್ನು ಮನೆ ಮನೆಗೆ ತೆರಳಿ ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂಬ ಸದಾಶಯದಿಂದಲೇ ಇಂತಹ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಕಾರಣ ಪ್ರತಿ ಗ್ರಾಮದಲ್ಲಿ ೪೦ ಮನೆಗಳಿಗೆ ಗ್ರಾಮದ ಮುಖಂಡರ ಸಮಿತಿ ರಚಿಸಿ, ಸಣ್ಣ-ಪುಟ್ಟ ವ್ಯಾಜ್ಯಗಳನ್ನು ಇಲ್ಲಿಯೇ ಪರಿಹರಿಸಲಾಗುತ್ತದೆ. ಅಲ್ಲದೆ ಇತ್ತೀಚಿನ ದಿನದಲ್ಲಿ ಒಂಟಿಮನೆಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆಯಿಂದ ಅನುಮಾನ ಬಂದ ವ್ಯಕ್ತಿಗಳನ್ನು ಪೊಲೀಸ್ ಇಲಾಖೆಗೆ ತಿಳಿಸುವುದು, ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ನೇರ ಇಲಾಖೆ ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ಶ್ರದ್ದೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ರಾಜ್ಯ ಸರ್ಕಾರದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಇಡೀ ದೇಶದಲ್ಲಿ ಪ್ರಥಮ ಎನ್ನಲಾಗಿದೆ. ಜನರ ಸಮಸ್ಯೆಗಳಿಗೆ ಖುದ್ದು ಮನೆಗೆ ತೆರಳಿ ಮಾಹಿತಿ ಮತ್ತು ಸಮಸ್ಯೆ ಪರಿಹಾರಕ್ಕೆ ಮುಂದಾದ ಸಂದರ್ಭದಲ್ಲಿ ಪೊಲೀಸರಿಗೆ ಗೌರವಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮುಂದಾಗಬೇಕಿದೆ. ಪೊಲೀಸರು ಜನಸ್ನೇಹಿಯಾಗಿ ಸಹೋದರತ್ವದ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಹಾಗೆಯೇ ಸಾರ್ವಜನಿಕರ ಹೆಚ್ಚಿನ ಸಹಕಾರ ಮುಖ್ಯ, ಜನರು ಗ್ರಾಮದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ತಿಳಿಸಿ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಬೇಲೂರು ಪೊಲೀಸ್ ಇಲಾಖೆ ಇಂತಹ ಅಮೂಲ್ಯ ಯೋಜನೆಯನ್ನು ಹೆಬ್ಬಾಳು ಗ್ರಾಮದಲ್ಲಿ ನಡೆಸಿದ್ದು ನಿಜಕ್ಕೂ ಸಂತೋಷವಾಗಿದೆ ಎಂದರು.










