ಬೇಲೂರು: ಸಾರಿಗೆ ಬಸ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ನಿತ್ಯ ಶಾಲಾ ಕಾಲೇಜಿಗೆ ಹೋಗುವ ನಮಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಬಸ್ ಡಿಪೋ ಇದ್ದರೂ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲ. ನಿತ್ಯ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಉನ್ನತ ವ್ಯಾಸಂಗಕ್ಕೆಂದು ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ಬೆಳಗ್ಗೆ 7ರಿಂದ 8 ಗಂಟೆವರೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಈ ಸಂಬಂಧ ವಿಭಾಗೀಯ ಅಧಿಕಾರಿಗಳನ್ನು ವಿಚಾರಿಸಲು ಹೋದರೆ ನಮಗೇ ಬಸ್ ಕೊರತೆ ಇದೆ. ನಿಮಗೆ ಬೇಕಾದ ಸಮಯಕ್ಕೆ ಬಸ್‌ಗಳನ್ನು ನೀಡಲು ಆಗುವುದಿಲ್ಲ ಎಂಬ ಉಡಾಫೆ ಉತ್ತರ ನೀಡಿದರು. ಜೊತೆಗೆ ಕೆಲ ಬಸ್‌ಗಳಲ್ಲಿ ಬಸ್ ಪಾಸ್‌ಗಳಿಗೆ ಎಂಟ್ರಿ ಇಲ್ಲ ಎಂದು ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿರುವ ಎಷ್ಟೋ ಉದಾಹರಣೆ ಇವೆ. ನಮ್ಮ ತೊಂದರೆಗಳನ್ನು ಕೇಳುವರು ಯಾರೂ ಇಲ್ಲ. ಇದು ಒಂದು ದಿನದ ಗೋಳಲ್ಲ, ನಿತ್ಯದ ಸಮಸ್ಯೆಯಾಗಿದೆ ಎಂದು ಅಲವತ್ತುಕೊಂಡರು.
ಇಂದು ಬೆಳಗ್ಗೆ ಪರೀಕ್ಷೆ ಇತ್ತು. ಆದರೂ ಹಾಸನ ಮತ್ತು ಚಿಕ್ಕಮಗಳೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಯಿತು. ಹೀಗಾದರೆ ಮುಂದಿನ ನಮ್ಮ ಭವಿಷ್ಯ ಏನು, ಮೂರ್ನಾಲ್ಕು ಬಾರಿ ಡಿಪೋಗೆ ಹೋಗಿ ಅರ್ಜಿ ಸಲ್ಲಿಸಿ ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಟೆಸಿದರು. ಇಷ್ಟೆಲ್ಲಾ ತೊಂದರೆಯಾದರೂ ಡಿಪೋ ಮ್ಯಾನೇಜರ್ ಆಗಲೀ, ಟಿಸಿಗಳಾಗಲಿ ಬರಲಿಲ್ಲ, ಮಕ್ಕಳಿಗೆ ಸಮಸ್ಯೆ ಆಲಿಸಲಿಲ್ಲ. ಕಡೆಗೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾರ್ವಜನಿಕರೂ ಕೈ ಜೋಡಿಸಿದರು.
ಶಾಸಕರಿಂದ ತರಾಟೆ:
ಈ ವೇಳೆ ಬೆಂಗಳೂರಿನಿಂದಲೇ ದೂರವಾಣಿ ಮೂಲಕ ಮಾತನಾಡಿದ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ದೂರವಾಣಿ ಮೂಲಕ ಸಮಸ್ಯೆ ತಿಳಿದ ಶಾಸಕರು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ಬಸ್ ವ್ಯವಸ್ಥೆ ಆಗಬೇಕು.
ನಿತ್ಯ 2 ಜಿಲ್ಲೆಗಳಿಗೆ 7-8 ಗಂಟೆವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸಾರಿಗೆ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2 ಬಸ್ ಬಿಡಲಾಯಿತು. ವಿದ್ಯಾರ್ಥಿಗಳಾದ ಹೇಮಂತ್, ವೇದಮೂರ್ತಿ, ವಿಕಾಸ್, ಆಕಾಶ್, ಸೃಷ್ಟಿ, ಯಶವಂತ್, ಶರತ್, ರಾಘು, ಆರೀಫ್ ಡಾ. ರಾಜ್‌ಕುಮಾರ್ ಸಂಘದ ತೀರ್ಥಂಕರ್ ವೆಂಕಟೇಶ್ ಹಾಜರಿದ್ದರು.










