ಹೊಳೆನರಸೀಪುರ | ಫೆಬ್ರವರಿ 5, 2026
ವಿಧಾನಸಭೆಯಲ್ಲಿ ಬಳಸಲಾದ ಅಸಭ್ಯ ಪದಗಳು ನಮ್ಮೆಲ್ಲರಿಗೂ ಅವಮಾನಕಾರಿಯಾಗಿವೆ. ಶಾಸಕರಾದ ಶಿವಲಿಂಗೇಗೌಡರು ಮಂತ್ರಿ ಮಾಡಲಿ ಎಂಬ ಉದ್ದೇಶದಿಂದ ಆ ರೀತಿಯ ಮಾತು ಆಡಿರಬಹುದು, ಅದಕ್ಕೆ ನಮ್ಮ ಅಸಹಮತಿ ಇಲ್ಲ. ಆದರೆ ಬಳಸಿದ ಪದಗಳು ಅತ್ಯಂತ ಕೆಟ್ಟವು ಎಂದು ಮಾಜಿ ಸಚಿವ, ಶಾಸಕ ಎ. ಮಂಜು ಅವರು ಶಿವಲಿಂಗೇಗೌಡರ ವರ್ತನೆಯನ್ನು ಕಟುವಾಗಿ ಟೀಕಿಸಿದರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದ ಹೇಮಾವತಿ ನೀರಾವರಿ ಇಲಾಖೆ ಕಚೇರಿಯಲ್ಲಿ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ವಿಧಾನಸಭೆ ಕಲಾಪವನ್ನು ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳು ಗ್ಯಾಲರಿಯಲ್ಲಿ ಕುಳಿತುಕೊಂಡಿರುತ್ತಾರೆ. ಆ ಮಕ್ಕಳು ನಮ್ಮ ಪ್ರತಿನಿಧಿಗಳ ನಡೆನುಡಿಯನ್ನು ಗಮನಿಸುತ್ತಾರೆ. ಇಂತಹ ಪದ ಬಳಕೆಯಿಂದ ಮಕ್ಕಳಿಗೆ ಯಾವ ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು.
ಯಾವುದೇ ಪಕ್ಷದಲ್ಲಿ ಇದ್ದರೂ ಶಾಸಕರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಮಹಿಳೆಯರ ಬಗ್ಗೆ ಈ ರೀತಿಯ ಪದಗಳನ್ನು ಬಳಸಲು ಯಾರಿಗೂ ಹಕ್ಕಿಲ್ಲ. ಸರ್ಕಾರಕ್ಕೆ ದೂರು ನೀಡಬೇಕಿದ್ದರೆ ಅದನ್ನು ಅಧಿಕೃತವಾಗಿ ಸಲ್ಲಿಸಲಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಈ ರೀತಿಯ ಮಾತುಗಳು ಎಷ್ಟು ಸರಿ ಎಂದು ಎ.ಮಂಜು ಪ್ರಶ್ನಿಸಿದರು.
ವೈಯಕ್ತಿಕವಾಗಿ ಮಾತನಾಡುವ ಮುನ್ನ ನಾನು ಯಾರು, ನನ್ನ ರಾಜಕೀಯ ಹಿನ್ನೆಲೆ ಏನು, ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಅರಿತುಕೊಳ್ಳುವುದೇ ಸಾಕು. ಅದರಿಂದಲೇ ಬುದ್ಧಿ ಬರಬೇಕು. ಸಾರ್ವಜನಿಕ ಜೀವನಕ್ಕೆ ಬಂದ ನಂತರ ಕಲಿತಿರುವ ಅಸಭ್ಯ ಪದಗಳನ್ನು ಬಿಟ್ಟು, ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು ಎಂದು ಶಾಸಕ ಎ.ಮಂಜು ತೀವ್ರವಾಗಿ ಟೀಕಿಸಿದರು.
holenarsipur-a-manju-criticizes-shivalingegowda-assembly-remarks










