ಆಲೂರು: ಪಕ್ಷ ಬಯಸಿದರೆ ಅರಸೀಕೆರೆಯಿಂದಲೇ ಸ್ಪರ್ಧೆ: ಎಚ್.ಡಿ.ರೇವಣ್ಣ

Holenarasipura constituency MLA H.D. Revanna said that he is ready to accept the challenge posed by MLA Shivalingegowda by contesting from Arasikere if the party decides.

ಆಲೂರು: ಪಕ್ಷ ನಿರ್ಧರಿಸಿದರೆ ಅರಸೀಕೆರೆಯಲ್ಲಿಯೇ ಸ್ಪರ್ಧಿಸುವ ಮೂಲಕ ಶಾಸಕ ಶಿವಲಿಂಗೇಗೌಡ ಹಾಕಿರುವ ಸವಾಲನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ಹೊಳೆನರಸೀಪುರ ಕ್ಷೇತ್ರ ಶಾಸಕ ಎಚ್.ಡಿ ರೇವಣ್ಣ ತಿಳಿಸಿದರು.

ತಾಲೂಕಿನ ಪಾಳ್ಯ ಗ್ರಾಮದಲ್ಲಿರುವ ಜೆಡಿಎಸ್ ಪಕ್ಷದ ಅಧ್ಯಕ್ಷ ಕೆ. ಎಸ್. ಮಂಜೇಗೌಡರ ನಿವಾಸದಲ್ಲಿ ಜ 24 ನೇ ರಂದು ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಬೃಹತ್ ಸಮಾವೇಶದ ಸಿದ್ಧತೆ ಕುರಿತಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಜಿಲ್ಲೆಯಲ್ಲಿ ಎರಡು ಸಮಾವೇಶಗಳನ್ನು ಮಾಡುವ ಮೂಲಕ ಜೆಡಿಎಸ್ ಪಕ್ಷದ ವರ್ಚಸ್ಸನ್ನು ಕುಂದಿಸುವ ಪ್ರಯತ್ನವನ್ನು ಮಾಡಲು ಹೊರಟಿದೆ ಆದರೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ನವರ ಆಟ ನಡೆಯುವುದಿಲ್ಲ.

ಮೊದಲು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರುಗಳು ಸರ್ಕಾರ ಬಂದು ಕಳೆದ ಎರಡೂವರೆ ವರ್ಷಗಳಲ್ಲಿ ಹಾಸನ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸಲಿ ನಮ್ಮ ಸರ್ಕಾರವಿದ್ದಾಗ ಹಾಗೂ ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಗೆ ತಂದಿರುವ ಅನುದಾನದಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿರುವುದಾಗಿ ಕಾಂಗ್ರೆಸ್ಸಿನವರು ಬಿಂಬಿಸಿಕೊಂಡು ಉದ್ಘಾಟನೆಗಳನ್ನು ಮಾಡಿರುವುದು ಖಂಡನೀಯವಾಗಿದೆ.

ಈ ಸರ್ಕಾರದ ಎರಡೂವರೆ ವರ್ಷ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಯು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೋಗಿದ್ದು ಬರೀ ರಸ್ತೆಗಳ ಗುಂಡಿಯನ್ನು ಮುಚ್ಚುವ ಕಾರ್ಯದಲ್ಲಿ ಮಾತ್ರ ತೊಡೆಗಿಕೊಂಡಿದ್ದು ಇದಕ್ಕೆ ರಾಜ್ಯದ ಜನತೆ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಾಂಗ್ರೆಸ್ ಪಕ್ಷಕ್ಕೆ ಕಲಿಸುತ್ತಾರೆ ಅಲ್ಲದೆ ನಮ್ಮ ಪಕ್ಷವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಅನ್ನು ಮಾಡಿಕೊಂಡಿದ್ದು ಹಾಸನ ವಿಧಾನಸಭಾ ಕ್ಷೇತ್ರ ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಮೈತ್ರಿ ನಾಯಕರು ತಮ್ಮ ಪಕ್ಷವನ್ನ ಬಿಟ್ಟು ಬೇರೆ ಪಕ್ಷದ ನಾಯಕರ ಜೊತೆ ರಾಜಕೀಯ ಲೆಕ್ಕಾಚಾರಗಳನ್ನು ಆರಂಭಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಮ್ಮ ಪಕ್ಷ ಮತ್ತು ಬಿಜೆಪಿ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಒಟ್ಟಾರೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ನ ಶಕ್ತಿ ಏನು ಎಂಬುದನ್ನು 24 ರಂದು ನಡೆಯುವ ಸಮಾವೇಶದ ಮೂಲಕ ತಕ್ಕ ಉತ್ತರವನ್ನು ನೀಡಬೇಕೆಂದು ತಿಳಿಸಿದರು.

ಮಾಜಿ ಸಚಿವ ಹೆಚ್.ಕೆ ಕುಮಾರಸ್ವಾಮಿ ಮಾತನಾಡಿ, ಇದೇ ತಿಂಗಳು 24 ನೇ ತಾರೀಖು ಹಾಸನದಲ್ಲಿ ನಡೆಯುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ನಮ್ಮ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ, ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರುಗಳು ಭಾಗವಹಿಸುತ್ತಿದ್ದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಬೂತುಗಳಿಂದ ಒಂದೊಂದು ಬಸ್ಸಿನಲ್ಲಿ ನಮ್ಮ ಪಕ್ಷದ ಮತದಾರರನ್ನು ಕರೆ ತರುವ ಜವಾಬ್ದಾರಿಯು ನಿಮ್ಮೆಲ್ಲರ ಮೇಲೆ ಇದ್ದು ಆಲೂರು ತಾಲೂಕಿನಿಂದ 5000ಕ್ಕೂ ಹೆಚ್ಚು ಜನರನ್ನು ಈ ಸಮಾವೇಶಕ್ಕೆ ಬರುವಂತೆ ಎಲ್ಲಾ ವ್ಯವಸ್ಥೆ ಮಾಡಬೇಕು.

ಕಳೆದ 2023ರ ಚುನಾವಣೆಯಲ್ಲಿ ನಮ್ಮ ಪಕ್ಷ ಕೆಲವೇ ಮತಗಳಿಂದ ಸೋಲನ್ನು ಅನುಭವಿಸಿದೆ ಆದರೆ ಈ ಬಗ್ಗೆ ಯಾವುದೇ ಕಾರ್ಯಕರ್ತರು ಎದೆಗುಂದುವ ಅವಶ್ಯಕತೆ ಇಲ್ಲ.

ಮುಂದಿನ 2028 ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಮರಳಿ ನಮ್ಮ ಪಕ್ಷವು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಕಾರ್ಯಕರ್ತರರಲ್ಲಿ ಭರವಸೆ ಮೂಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಜಿ.ಪಂ ಮಾಜಿ ಸದಸ್ಯೆ ಸಂಚಲ ಕುಮಾರಸ್ವಾಮಿ, ಪ.ಪಂ ಮಾಜಿ ಅಧ್ಯಕ್ಷ ಡಿಎಸ್ ಜಯಣ್ಣ, ಧರ್ಮರಾಜು, ಹಾ.ಹಾ.ಓ ನಿರ್ದೇಶಕ ಪಿ.ಎಲ್ ನಿಂಗರಾಜು, ಜಿಲ್ಲಾ ಸಹಕಾರ ಸಂಘ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ತಾ.ಪಂ ಮಾಜಿ ಸದಸ್ಯ ನಟರಾಜು ನಾಕಲಗೂಡು, ಸಿ.ವಿ ಲಿಂಗರಾಜು, ಹಿರಿಯ ಮುಖಂಡರಾದ ಬಿ.ಸಿ ಶಂಕರಾಚಾರ್, ಕದಾಳು ರಾಜಪ್ಪಗೌಡ,ಗಂಗಾಧರಪ್ಪ, ಗೇಕರವಳ್ಳಿ ಬಸವರಾಜು, ಸೇರಿದಂತೆ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Holenarasipura constituency MLA H.D. Revanna said that he is ready to accept the challenge posed by MLA Shivalingegowda by contesting from Arasikere if the party decides.