ಹಾಸನ: ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ನೆಲಗಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸನ್ ರೈಸ್ ರೆಸಾರ್ಟ್ ನಿಂದ ಗ್ರಾಮಸ್ಥರಿಗೆ ಅನೇಕ ರೀತಿಯ ತೊಂದರೆಗಳು ಎದುರಾಗುತ್ತಿವೆ ಎಂದು ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗ್ರಾಮದ ಗದ್ದೆ-ತೋಟಗಳ ರಸ್ತೆಯಲ್ಲೇ ವಾಣಿಜ್ಯ ರೆಸಾರ್ಟ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕೃಷಿ ಕೆಲಸಕ್ಕೆ ತೆರಳುವ ರೈತರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಿಂಗಲ್ ಫೇಸ್ ವಿದ್ಯುತ್ ಲೈನ್ ಮೂಲಕ ನೂರಾರು ಬಲ್ಬುಗಳನ್ನು ಬಳಸಿ ಬೆಳಕು ಹಾಕಿರುವುದರಿಂದ ಗ್ರಾಮಸ್ಥರ ಮನೆಗಳಿಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂದು ಆರೋಪಿಸಿದರು.
ರೆಸಾರ್ಟ್ಗೆ ಪ್ರತ್ಯೇಕ ವಾಣಿಜ್ಯ ರಸ್ತೆ ನಿರ್ಮಿಸದೆ, ಗ್ರಾಮಸ್ಥರ ಸಂಚಾರದ ರಸ್ತೆಗಳನ್ನೇ ಬಳಸಲಾಗುತ್ತಿದ್ದು, ದಿನನಿತ್ಯ ಸುಮಾರು 600 ಮೀಟರ್ ದೂರ ವಾಹನಗಳನ್ನು ರಿವರ್ಸ್ ತೆಗೆದು ದಾರಿ ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಾರಿ ಸಮಸ್ಯೆಯಿಂದ ಜಗಳಗಳಿಗೂ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಫೋಟೋ ಶೂಟ್ ಮಾಡುವ ನೆಪದಲ್ಲಿ ಗದ್ದೆಗಳಿಗೆ ಇಳಿದು ಪ್ಲಾಸ್ಟಿಕ್, ಬಾಟಲ್, ಕಾಗದಗಳನ್ನು ಎಸೆದು ಪರಿಸರ ಮಾಲಿನ್ಯ ಮಾಡಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಮುಖ್ಯ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಕೆಎಸ್ಆರ್ಟಿಸಿ ಬಸ್ಗಳು, ಶಾಲಾ ವಾಹನಗಳು ಹಾಗೂ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ತೀವ್ರ ಆಡಚಣೆ ಉಂಟಾಗಿದೆ ಎಂದರು.










