🚨 ಹಾಸನ ಜಿಲ್ಲೆಯ ಉಮ್ರಾ ಯಾತ್ರಿಕರ ಸುರಕ್ಷಿತ ವಾಪಸಾತಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ!: ಶ್ರೇಯಸ್ ಪಟೇಲ್

ಹಾಸನ (kannadapost.com): ಸೌದಿ ಅರೇಬಿಯಾಕ್ಕೆ ಪವಿತ್ರ ಉಮ್ರಾ ಯಾತ್ರೆಗೆ ತೆರಳಿ, ವಿಮಾನಗಳ ರದ್ದತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಾಸನ ಜಿಲ್ಲೆಯ ಯಾತ್ರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದ್ದಾರೆ.

ಯಾತ್ರಿಕರ ಸುರಕ್ಷಿತ ಹಾಗೂ ತ್ವರಿತ ವಾಪಸಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ತುರ್ತು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರ ಕಚೇರಿಯು, ರಿಯಾದ್‌ನ ಭಾರತೀಯ ರಾಯಭಾರ ಕಚೇರಿಗೆ ಅಗತ್ಯ ಸೂಚನೆಗಳನ್ನು ನೀಡಿರುವುದಾಗಿ ಅಧಿಕೃತವಾಗಿ ತಿಳಿಸಿದೆ.

ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ

ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಹಾಗೂ ಜೆದ್ದಾದ ಭಾರತೀಯ ದೂತಾವಾಸವು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಮತ್ತು ಪ್ರವಾಸಿ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಸಂಕಷ್ಟದಲ್ಲಿರುವ ಯಾತ್ರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ ಒಂದು ವಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 3,000 ಉಮ್ರಾ ಯಾತ್ರಿಕರು ಭಾರತಕ್ಕೆ ಮರಳಿದ್ದಾರೆ. ಇದರೊಂದಿಗೆ ಪೂರ್ವನಿಗದಿತ ವಿಮಾನಗಳ ಮೂಲಕ 10,000ಕ್ಕೂ ಹೆಚ್ಚು ಯಾತ್ರಿಕರು ಭಾರತಕ್ಕೆ ವಾಪಸಾಗಿದ್ದಾರೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

ಇನ್ನೂ ವಾಪಸಾಗಬೇಕಿರುವ ಯಾತ್ರಿಕರ ಸುರಕ್ಷಿತ ಪ್ರಯಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ತುರ್ತು ನೆರವು ಒದಗಿಸಲು 24 ಗಂಟೆಗಳ ಸಹಾಯವಾಣಿ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.

ಯಾತ್ರಿಕರು ಮರಳುವವರೆಗೆ ನಿರಂತರ ಸಂಪರ್ಕ: ಸಂಸದ

“ಹಾಸನ ಜಿಲ್ಲೆಯ ಪ್ರತಿಯೊಬ್ಬ ಯಾತ್ರಿಕರೂ ಸುರಕ್ಷಿತವಾಗಿ ತಮ್ಮ ಕುಟುಂಬಗಳನ್ನು ಸೇರಬೇಕು ಎಂಬುದು ನನ್ನ ಮೊದಲ ಆದ್ಯತೆಯಾಗಿದೆ. ಎಲ್ಲ ಯಾತ್ರಿಕರೂ ಸುರಕ್ಷಿತವಾಗಿ ಮರಳುವವರೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ” ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದ್ದಾರೆ.

ತಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ತುರ್ತು ಸಹಾಯವಾಣಿ ಸಂಖ್ಯೆಗಳು

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿರುವ ಉಮ್ರಾ ಯಾತ್ರಿಕರು ತುರ್ತು ನೆರವಿಗಾಗಿ ಕೆಳಗಿನ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಿಯಾದ್‌ನ ಭಾರತೀಯ ರಾಯಭಾರ ಕಚೇರಿ

  • +966 554412016
  • +966 542126784

ಜೆದ್ದಾದ ಭಾರತೀಯ ದೂತಾವಾಸ

  • +966 12 2614093
  • +966 556122301