ಹಾಸನ: ಪ್ರೇಮವಿವಾಹದ ದಾರುಣ ಅಂತ್ಯ: ಆಸ್ಪತ್ರೆಯಲ್ಲಿ ಪತಿ, ಮನೆಯಲ್ಲಿ ಪತ್ನಿ ಶವ

ಹಾಸನ: ಪತಿ–ಪತ್ನಿ ನಡುವೆ ಉಂಟಾದ ಕಲಹದ ಹಿನ್ನೆಲೆ ಒಂದೇ ಕುಟುಂಬದಲ್ಲಿ ಎರಡು ಆಘಾತಕಾರಿ ಘಟನೆಗಳು ನಡೆದಿರುವ ಘಟನೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ದಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಮೂರು ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಚೇತನ್ (28) ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದರೆ, ಇದೇ ವೇಳೆ ಪತ್ನಿ ರಂಜಿತಾ (25) ಪತಿ ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ರಂಜಿತಾ–ಚೇತನ್ ದಂಪತಿ, ಹೊಂದಾಣಿಕೆ ಕೊರತೆಯಿಂದಾಗಿ ನಿರಂತರ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಮಾನಸಿಕ ಒತ್ತಡದಿಂದ ಬೇಸತ್ತು ಎರಡು ದಿನಗಳ ಹಿಂದೆ ಚೇತನ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ ರಂಜಿತಾ ಮಗನೊಂದಿಗೆ ಆಸ್ಪತ್ರೆಗೆ ತೆರಳಿ ಪತಿ ಚೇತನ್ ಅವರನ್ನು ನೋಡಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಅದೇ ರಾತ್ರಿ ಪತಿ ಮನೆಯಲ್ಲೇ ರಂಜಿತಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ರಂಜಿತಾ ಸಾವು ವರದಕ್ಷಿಣೆ ಕಿರುಕುಳದಿಂದ ಸಂಭವಿಸಿದೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದು, ಈ ಸಂಬಂಧ ಪತಿ ಚೇತನ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.