ಹಾಸನ: ಸಮಾಜ ನಮಗೆ ಏನು ಕೊಟ್ಟಿದೆ ಅನ್ನೋದಕ್ಕಿಂತ ನಾವು ಸಮಾಜಕ್ಕೆ ಏನು ಕೊಡ್ತಾ ಇದ್ದೀವಿ ಅನ್ನೋದನ್ನ ಅರಿತು ಎಲೆ ಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಅನೇಕ ಮಹನೀಯರಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಂತಹವರ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುವುದರಿಂದ ಅವರ ಕೆಲಸಕ್ಕೆ ಒಂದು ಸ್ಫೂರ್ತಿ ಸಿಗುತ್ತದೆ, ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಅನುವು ಮಾಡಿಕೊಳ್ಳುತ್ತದೆ ಮತ್ತು ಇತರರಿಗೂ ಮಾದರಿಯಾಗುತ್ತದೆ ಹಾಗೂ ಪ್ರೇರಣೆ ನೀಡುತ್ತದೆ. ಇವತ್ತು ಇಂತಹ ಸಾಧಕರನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ಅದರ ಜೊತೆಗೆ ಒಂದು ಉತ್ತಮವಾದ ಕಾರ್ಯಕ್ರಮ ಆಯೋಜಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ ಎಂದು ಸಾಹಿತಿ ಎನ್. ಶೈಲಜಾ ಹಾಸನ ಅಭಿಪ್ರಾಯಪಟ್ಟರು.
ಕೇಂದ್ರ ಕಸಾವೇ ಹಾಸನ ತಾಲ್ಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷೆ ನಮ್ಮ ಹೃದಯದ ಭಾಷೆಯಾಗಿ ಸದಾಕಾಲ ನೆಲೆ ನಿಲ್ಲುವಂತಾಗ ಬೇಕಾದರೆ ನಾವು ಹೇಗೆ ಭಾಷೆಯನ್ನು ಉಳಿಸಬಹುದು, ಬೆಳೆಸಬಹುದು ಅನ್ನೋ ನಿಟ್ಟಿನಲ್ಲಿ ಆಲೋಚಿಸಿದರೆ ಪ್ರತಿನಿತ್ಯ ನಾವು ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಉಳಿಸಬಹುದಾಗಿದೆ ಎಂದರು. ಲಿಪಿಯ ರಾಣಿ ಎಂದು ಹೆಸರಾಗಿರುವ ಕನ್ನಡದ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದ ಹೆಗ್ಗಳಿಕೆ ವಚನಕಾರರಿಗೆ ಸಲ್ಲುತ್ತದೆ. ಕನ್ನಡ ಭಾಷೆಯನ್ನು ಉಳಿಸುವಲ್ಲಿ ವಚನಗಾರರ ಪಾತ್ರ ಹೆಚ್ಚಾಗಿದೆ.
ದಿನನಿತ್ಯದ ಸಂಹನದಲ್ಲಿ ಕೂಡ ನಾವು ಕನ್ನಡ ಭಾಷೆಯನ್ನು ಬಳಸುವ ಮೂಲಕ ಮಕ್ಕಳಲ್ಲಿಯೂ ಮನೆಯಲ್ಲಿಯೂ ಭಾಷೆ ಮೇಲೆ ಅಭಿಮಾನ ಬೆಳೆಸಬಹುದು. ಮನೆಯಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡುವುದರ ಮೂಲಕ ಮಕ್ಕಳಲ್ಲಿ ಭಾಷೆ ಬಗ್ಗೆ ಪ್ರೀತಿ ಬಳಸಬಹುದು. ಬರೆಯುವುದು ಜೀವಂತಿಕೆ ಲಕ್ಷಣ. ಕಾವ್ಯಸೃಷ್ಟಿಗೆ ಇಂತಹ ಜೀವಂತಿಕೆಗೆ ಒಂದು ಪ್ರೇರಣೆ ಇದ್ದೇ ಇರುತ್ತದೆ. ನಾವು ಕಾಣುವ ನೋಡುವ, ಜರುಗುವ ಘಟನೆ, ವಿಷಯಗಳು ಕಾವ್ಯಕ್ಕೆ ವಸ್ತುವಾಗುತ್ತವೆ ಎಂದರು.
ಪ್ರೇರಣೆ ಎಂಬುದು ಬಾಹ್ಯ ಅಥವಾ ಆಂತರಿಕವಾಗಿಯೂ ಇರುತ್ತದೆ. ಕವಿ ಮನಸ್ಸಿಗೆ ಮಾತ್ರ ಬರಹದ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆ ಮೂಲಕ ಸಹೃದಯರ ಮನಸ್ಸನ್ನು ಮುದಗೊಳಿಸುವಂತಹ ಸಾರ್ಥಕತೆ ಕೂಡ ಸಾಧ್ಯವಾಗುತ್ತದೆ. ಬೇರೆಯವರು ನಮ್ಮ ಕೊರತೆ, ನ್ಯೂನ್ಯತೆಗಳನ್ನು ಹೇಳುವುದಕ್ಕಿಂತ ನಾವೇ ನಮ್ಮ ಕೊರತೆ ಮತ್ತು ನ್ಯೂನ್ಯತೆ ಬಗ್ಗೆ ಅರಿವು ಮಾಡಿಕೊಂಡು ಅದನ್ನು ತಿದ್ದು ಕೊಳ್ಳುವುದರಿಂದ ಸಾಕಷ್ಟು ಪ್ರಬುದ್ಧತೆ ಸಾಧಿಸಲು ಸಾಧ್ಯವಾಗುತ್ತದೆ.
ಈ ಶಕ್ತಿ ನಮಗೆ ಸಿಗುವುದು ಅಧ್ಯಯನದಿಂದ, ಸೂಕ್ಷ್ಮ ಗ್ರಹಿಕೆಯಿಂದ. ಹಾಗಾಗಿ ಕವಿಯಾದವನು ನಿರಂತರ ಅಧ್ಯಯನಶೀಲತೆ ಹೊಂದಿ ಸೂಕ್ಷ್ಮ ಗ್ರಹಿಕೆಯಿಂದ ಕಾವ್ಯ ರಚನೆಯತ್ತ ತೊಡಗಬೇಕು ಎಂದು ಕರೆಕೊಟ್ಟರು. ಜಿಲ್ಲಾ ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಸಾರ್ವಕಾಲಿಕವಾಗಿ ಅಸ್ತಿತ್ವದಲ್ಲಿರಬೇಕಾದರೆ ಮೊದಲು ಕನ್ನಡ ಶಾಲೆಗಳು ಅಭಿವೃದ್ಧಿಯಾಗಬೇಕು.
ಕನ್ನಡ ಶಾಲೆಗಳು ಉಳಿಯಬೇಕಾದರೆ ನಮ್ಮಲ್ಲಿ ಆಂಗ್ಲಭಾಷಾ ವ್ಯಾಮೋಹ ಕಳಚಬೇಕು, ನಮ್ಮ ನಾಡು-ನುಡಿಯ ಬಗೆಗೆ ಕಾಳಜಿ ಹೆಚ್ಚಾಗಬೇಕು. ಮನೆಯಲ್ಲಿ ಮೊದಲು ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದರು.
ಪ್ರಶಸ್ತಿ ಪುರಸ್ಕೃತರು: ತುಳಸೀಪ್ರಸಾದ್ ಆರ್.ಜಿ.(ಮುದ್ರಣ), ಸುರೇಶ್ ಗುರೂಜಿ(ಸ್ಕೌಟ್ಸ್ ಮತ್ತು ಗೈಡ್ಸ್), ಜಯಶಂಕರ್ ಬೆಳಗುಂಬ(ರಂಗಭೂಮಿ), ಮೋಹನ್ ಕುಮಾರ್ ಎಚ್.ಟಿ.(ಮಾಧ್ಯಮ), ನೀಲಾವತಿ ಸಿ.ಎನ್. (ಸಾಹಿತ್ಯ), ವೇದಾವತಿ ಬಿ.(ಸಂಘಟನೆ), ಜ್ಯೋತಿ ಗಣೇಶ್(ಸಾಮಾಜಿಕ) ಅನುರಾಧ(ಪೌರ ಕಾರ್ಮಿಕ), ನಾಗರಾಜು(ಚೆಮ್ಮಾರಿಕೆ), ಎಚ್.ಎಲ್.ಗೋಪಾಲ್ (ಮುದ್ರಣ).
ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಪತ್ರಕರ್ತ ನಾಗರಾಜ್ ಹೆತ್ತೂರು, ಜಂಟಿ ಕಾರ್ಯದಶಿ ನಾಗರಾಜ್ ದೊಡ್ಡಮನಿ, ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ.ಭರತ್, ಸಮಾಜ ಸೇವಕ ಡಾ.ವಿಜಯಕುಮಾರ್ ಹಾಗೂ ತಾಲೂಕು ಅಧ್ಯಕ್ಷರು ಇದ್ದರು. ಎಚ್.ಎಸ್.ಬಸವರಾಜ್ ನಿರೂಪಿಸಿದರು, ಗ್ಯಾರಂಟಿ ರಾಮಣ್ಣ ಪ್ರಾರ್ಥಿಸಿದರು. ವಾಸು ಸ್ವಾಗತಿಸಿ, ವಂದಿಸಿದರು.










