ಹಾಸನ: ಕ್ರಿಸ್ಮಸ್ ರ್ಯಾಲಿ ಭರವಸೆಯ ಯಾತ್ರೆ: ಮನರಂಜಿಸಿದ ಕ್ರೈಸ್ತರ ಸಾಂಸ್ಕೃತಿಕ ಮೆರವಣಿಗೆ

ಹಾಸನ: ನಗರದ ಸಂತ ಅಂತೋಣಿ ದೇವಾಲಯದ ವತಿಯಿಂದ ಚರ್ಚ್ ಶನಿವಾರ ಕ್ರಿಸ್‌ಮಸ್‌ ರ‌್ಯಾಲಿ ಭರವಸೆಯ ಯಾತ್ರೆ – 2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

“ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಹಾಸನ ಘಟಕದ ವತಿಯಿಂದ ಜಿಲ್ಲೆಯ ಸಮಸ್ತ ಕ್ರೈಸ್ತ ಸಮುದಾಯದ ಸಹಯೋಗದಲ್ಲಿ ರ‌್ಯಾಲಿ ಆರಂಭವಾಯಿತು.

“ರ‌್ಯಾಲಿಯಲ್ಲಿ ಸುಮಾರು ನಾಲ್ಕು ಸಾವಿರ ಕ್ರೈಸ್ತರು ಕ್ರಿಸ್ಮಸ್ ಸಿದ್ಧತಾ ಸಂಭ್ರಮದ ಮೆರುಗನ್ನು ಹೆಚ್ಚಿಸಿದರು. ಸ್ತಬ್ಧ ಚಿತ್ರಗಳು, ಕ್ರಿಸ್‌ಮಸ್ ನೃತ್ಯ ರೂಪಕಗಳು, ಕ್ರಿಸ್ಮಸ್ ಹಾಡುಗಳು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಸನ ನಗರದ ಸಾರ್ವಜನಿಕರನ್ನು ಮನರಂಜಿಸಿತು.

ಮೆರವಣಿಗೆ ನಗರದ ಎನ್.ಆರ್. ಸರ್ಕಲ್, ಮಹಾವೀರ ವೃತ್ತ, ಸಹ್ಯಾದ್ರಿ ಸರ್ಕಲ್, ಮಹಾರಾಜ ಪಾರ್ಕ್ ರಸ್ತೆ, ಸ್ಲೆಟರ್ಸ್ ಮೆಮೋರಿಯಲ್ ಹಾಲ್ ವೃತ್ತ, ಆರ್.ಸಿ. ರಸ್ತೆ, ಜಿಲ್ಲಾ ಪಂಚಾಯಿತಿ ಸರ್ಕಲ್ ಮೂಲಕ ಸಂತ ಅಂತೋಣಿಯವರ ದೇವಾಲಯಕ್ಕೆ ವಾಪಸ್ಸಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕ್ರೈಸ್ತ ಸಮುದಾಯಕ್ಕೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು. ನಂತರ ಮನರಂಜನಾ ಕಾರ್ಯಕ್ರಮಗಳು ನಡೆದವು.

ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯನ್ನು ಈ ಮೊದಲೇ ಫಾದರ್ ಪ್ಯಾಟ್ರಿಕ್ ಜೊಹಾನಸ್ ರಾವ್, ಫಾಸ್ಟರ್ ಸುದರ್ಶನ್ ಕುಮಾರ್, ಫಾದರ್ ಜೋಸೆಫ್, ಸಿಲ್ವೆಸ್ಟರ್, ಜೋಶ್ವ ತಿಳಿಸಿದ್ದರು.

ಕಾರ್ಯಕ್ರಮದ ಮುಖ್ಯಸ್ಥರಾಗಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್ ಅಂತೋಣಿಸ್ವಾಮಿ ಉಪಸ್ಥಿತರಿದ್ದರು.