ಹಾಸನ: ತ್ರಿಭಾಷಾ ನೀತಿ ರದ್ದು ಮಾಡಿ ಕನ್ನಡ ಕಡ್ಡಾಯ ಜಾರಿಗೆ ತರಬೇಕು – ಕದಂಬ ಸೈನ್ಯ ಆಗ್ರಹ

ಹಾಸನ: ರಾಜ್ಯದಲ್ಲಿ ಕನ್ನಡ ಕಡ್ಡಾಯ ನೀತಿ ಜಾರಿಯಾಗಬೇಕೆಂದು ಹಾಗೂ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ತರುವ ತ್ರಿಭಾಷಾ ನೀತಿಯನ್ನು ತಕ್ಷಣವೇ ರದ್ದುಪಡಿಸಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆ ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುವ ನೀತಿ ಜಾರಿಗೆ ಬಂದರೂ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಲು ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ. ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿ ಸಾಮ್ರಾಜ್ಯಶಾಹಿ ಕನ್ನಡದ ಕತ್ತು ಹಿಸುಕುತ್ತಿದೆ ಎಂದು ಹೇಳಿದರು.
ಅವರು ಮಾತನಾಡಿ, ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ 2017ರ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕಾಯ್ದೆ ರೂಪದಲ್ಲಿ ಜಾರಿಯಾಗಬೇಕು. ರಾಜ್ಯದ ಕೈಗಾರಿಕೆ, ಬ್ಯಾಂಕ್ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಪರಭಾಷಿಕರ ಪ್ರಾಬಲ್ಯ ಹೆಚ್ಚುತ್ತಿದ್ದು, ಕನ್ನಡಿಗರಿಗೆ ಉದ್ಯೋಗ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
ಸಂಘಟನೆಗಳು ಕನ್ನಡ ಮತ್ತು ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ‘ನಾಡು ದ್ರೋಹ ಕಾಯ್ದೆ’ ತರಬೇಕೆಂದು ಆಗ್ರಹಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ವಿಡಿಯೋಗಳು ಹರಿದಾಡುತ್ತಿವೆ. ಇಂತಹ ಕೃತ್ಯಗಳಿಗೆ ರಾಷ್ಟ್ರದ್ರೋಹದ ಸಮಾನ ಶಿಕ್ಷೆ ವಿಧಿಸಬೇಕು ಎಂದರು.
ಅವರು ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ನಡೆದ ಹಲ್ಲೆ ಘಟನೆಯ ಖಂಡನೆ ಮಾಡಿ, ‘ಕನ್ನಡ ವಿರೋಧಿ ಸಂಘಟನೆಗಳ
ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ನಾಡದ್ರೋಹಿ ಕಾಯ್ದೆ ತರಬೇಕು” ಎಂದರು. ಇದೇ ವೇಳೆ ವಲಸಿಗರ ಅಕ್ರಮ ಪಡಿತರ ಚೀಟಿಗಳನ್ನು ರದ್ದುಪಡಿಸಿ, ಮೂಲ ಕನ್ನಡಿಗರಿಗೆ ಹಕ್ಕು ವಾಪಸ್ ನೀಡಬೇಕೆಂದು ಹಾಗೂ ಹೊರರಾಜ್ಯ, ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ರಾಜ್ಯಾದ್ಯಂತ ಕನ್ನಡ ನಾಮಫಲಕ ಕಡ್ಡಾಯ ನಿಯಮ ಉಲ್ಲಂಘನೆಯ ವಿರುದ್ಧವೂ ಅವರು ಧ್ವನಿ ಎತ್ತಿದರು. “ಕನ್ನಡ ನಾಮಫಲಕ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದರೂ ಇಂಗ್ಲಿಷ್ ಮತ್ತು ಪರಭಾಷಾ ಫಲಕಗಳು ಇನ್ನೂ ರಾರಾಜಿಸುತ್ತಿವೆ. ಉಲ್ಲಂಘನೆ ಮಾಡಿದವರಿಗೆ 1 ಲಕ್ಷದಿಂದ 13 ಲಕ್ಷದ ದಂಡ ಮತ್ತು ಲೈಸೆನ್ಸ್ ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು. ಕದಂಬ ಚಕ್ರವರ್ತಿ ಮಯೂರವರ್ಮ ಮತ್ತು ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಅವರ ಪುತ್ತಳಿಗಳನ್ನು ವಿಧಾನಸೌಧದ ಮುಂದೆ ಹಾಗೂ ಜಿಲ್ಲೆಯ ಕೇಂದ್ರಗಳಲ್ಲಿ ಸ್ಥಾಪಿಸಬೇಕು. ಜೊತೆಗೆ ಗದುಗಿನ ರೈಲ್ವೆ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಬೇಕು. ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಮತ್ತು ನಟರಾಜಕುಮಾರರಿಗೆ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಮನವಿ ಮಾಡಬೇಕು ಎಂದರು.