Hassan: ಶಾಸಕ ‘ಸಿಮೆಂಟ್’ ಮಂಜು ವಿರುದ್ಧ 10% ಕಮಿಷನ್, ಅಡ್ಡಮತದಾನದ ಗಂಭೀರ ಆರೋಪ ಮಾಡಿದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್

ಹಾಸನ/Hassan: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ‘ಸಿಮೆಂಟ್’ ಮಂಜು ಅವರ ವಿರುದ್ಧ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು ಭ್ರಷ್ಟಾಚಾರ, ಅಡ್ಡಮತದಾನ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

​ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಲಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಶಾಸಕರ ಪಾಪದ ಕೊಡ ತುಂಬಿದೆ, ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಮಾಡಿದ ಪ್ರಮುಖ ಆರೋಪಗಳು:

  • ಅಡ್ಡಮತದಾನ ಹಾಗೂ ಶಾಸಕ ಸ್ಥಾನ ಮಾರಾಟ: ೫ ರಿಂದ ೧೦ ಕೋಟಿ ರೂಪಾಯಿ ಹಣ ಪಡೆದುಕೊಂಡು ಇವರೇ ಅಡ್ಡ ಮತದಾನ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಪಡೆದು ತಮ್ಮ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇದೆಯಾ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
  • 10% ಕಮಿಷನ್ ದಂಧೆ: ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಶಾಸಕರು ೧೦ ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ. ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆಯಲ್ಲಿ ಭಾರೀ ಲೂಟಿ ಹೊಡೆದಿದ್ದು, ಪರ್ಸೆಂಟೇಜ್ ಗಲಾಟೆಯಿಂದಾಗಿಯೇ ಕ್ಷೇತ್ರದಲ್ಲಿ ಬರೋಬ್ಬರಿ ೧೮ ಕಾಮಗಾರಿಗಳು ಸ್ಥಗಿತಗೊಂಡಿವೆ.
  • ಕಾಡೆಮ್ಮೆಗಳ ಮಾರಣಹೋಮ: ಕಾಡೆಮ್ಮೆಗಳನ್ನು ಕಡಿದು, ಪ್ರತಿ ಕೆ.ಜಿಗೆ ೨೦೦೦ ರೂ. ನಂತೆ ಮಾಂಸ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಆದರೂ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.
  • ಅಕ್ರಮ ಮರಳು ಗಣಿಗಾರಿಕೆ: ಕಳೆದ ನಾಲ್ಕು ವರ್ಷಗಳಿಂದ ಹೇಮಾವತಿ ನದಿಯಲ್ಲಿ ಮರಳನ್ನು ಲೂಟಿ ಮಾಡಲಾಗುತ್ತಿದೆ. ಲೂಟಿ ಮಾಡಲು ಶಾಸಕರು ತಮ್ಮ ಸಹೋದರರನ್ನೇ ನೇಮಿಸಿದ್ದಾರೆ. ಹಿಂದಿನ ಶಾಸಕರು ಬೇಡ ಎಂದು ಜನ ಬದಲಾವಣೆ ಮಾಡಿದರು, ಆದರೆ ಇವರೂ ಅದೇ ಲೂಟಿಯಲ್ಲಿ ತೊಡಗಿದ್ದಾರೆ.
  • ಡ್ರಗ್ಸ್ ಹಾವಳಿ: ಕ್ಷೇತ್ರದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದೆ. ಆದರೆ, ಇದನ್ನು ತಡೆಯುವ ತಾಕತ್ತು ಶಾಸಕರಿಗಿಲ್ಲ. ಅಧಿಕಾರಿಗಳು ಸಹ ಶಾಸಕರೆಂದರೆ ಭೂತನಾ ಎನ್ನುವಂತೆ ಭಯಪಡುತ್ತಿದ್ದಾರೆ.

ದಲಿತರ ಶೋಷಣೆ ಹಾಗೂ ಹೋರಾಟದ ಎಚ್ಚರಿಕೆ:

“ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂದು ಟೋಪಿ ಹಾಕಿಕೊಂಡು ಪೆರೇಡ್ ಮಾಡ್ತಾರೆ. ಆದರೆ, ಅಲ್ಲಿ ಪೆರೇಡ್ ಮಾಡಿ ಇಲ್ಲಿ ದಲಿತರ ಶೋಷಣೆ ಮಾಡುತ್ತಿದ್ದಾರೆ. ಇಲ್ಲಿ ಮೀಸಲಾತಿ ಎನ್ನುವುದು ಶಾಪವಾಗಿ ಪರಿಣಮಿಸಿದೆ” ಎಂದು ಹೆಚ್.ಎಂ. ವಿಶ್ವನಾಥ್ ಕಿಡಿಕಾರಿದ್ದಾರೆ.

​”ಇಷ್ಟು ದಿನ ಪಾಪದ ಕೊಡ ತುಂಬಲಿ ಎಂದು ಮೌನವಾಗಿದ್ದೆವು. ಅನ್ಯಾಯವನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಶಾಸಕರ ದಂಧೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳ ಕಚೇರಿಯ ಎದುರು ಧರಣಿ ಕೂರುತ್ತೇನೆ ಹಾಗೂ ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ” ಎಂದು ಅವರು ಗುಡುಗಿದರು.