ಹಾಸನ : ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ, ಕಂದಾಯ ಸಚಿವ ಕೃಷ್ಣಭೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಕೆಲವರಿಗೆ ಏನಾಗಿದೆ ಅಂದರೆ ಭಾವನೆಗಳ ಜೊತೆ ಚೆಲ್ಲಾಟ ಆಡಿ ಸಮಾಜವನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಉದ್ಯೋಗ ಆಗಿಬಿಟ್ಟಿದೆ. ಸಮಾಜ ಕಟ್ಟುವುದು, ಜನರನ್ನು ಕೂಡುವುದು ಇವರಿಗೆ ಬೇಡ, ಸಮಾಜ ಒಡೆಯುವುದೇ ಉದ್ಯೋಗವಾಗಿದೆ” ಎಂದು ಸಚಿವರು ಕಿಡಿಕಾರಿದರು.
ಬಾನುಮುಷ್ತಾಕ್ ಅವರ ಸಾಧನೆಯನ್ನು ಹೊಗಳಿದ ಕೃಷ್ಣಭೈರೇಗೌಡ, “ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಕೀರ್ತಿ ತಂದಿದ್ದಾರೆ. ನೊಬೆಲ್ ಮಟ್ಟದ ಜಾಗತಿಕ ಪ್ರಶಸ್ತಿ ಸಿಕ್ಕಿರದಿದ್ದರೂ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನ, ಗೌರವದ ಸಂಕೇತವಾಗಿದ್ದಾರೆ. ಹಾಸನದಲ್ಲಿ ಜನಪರ ಹೋರಾಟ, ರೈತರ ಪರ ಹೋರಾಟ, ಶೋಷಿತ ಮಹಿಳೆಯರ ಪರ ಹೋರಾಟ ಮಾಡಿದವರು” ಎಂದರು.
ವಿರೋಧ ವ್ಯಕ್ತಪಡಿಸುತ್ತಿರುವವನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ಅದನ್ನು ನೀವು ಜಾತಿ, ಧರ್ಮ ಅಂತ ಹೇಳಿ ಕನ್ನಡಕ್ಕೆ ಸಿಕ್ಕಿರುವ ಗೌರವವನ್ನು ಕಳೆಯಬೇಡಿ. ಅವರು ಯಾವ ಜಾತಿ, ಧರ್ಮಕ್ಕೆ ಸೇರಿದವರಲ್ಲ, ಕನ್ನಡಿಗರ ಹೆಮ್ಮೆ. ಅದನ್ನು ನಾವು ಸ್ವಾಗತಿಸಬೇಕು. ಅದರ ಹೆಸರಿನಲ್ಲಿ ಸಮಾಜ ಒಡೆಯುವುದು ನಿಜವಾಗಿ ಒಳ್ಳೆಯ ಉದ್ದೇಶ ಇರುವವರು ಮಾಡುವ ಕೆಲಸವಲ್ಲ” ಎಂದು ಎಚ್ಚರಿಕೆ ನೀಡಿದರು.
ಟೀಕೆ ಮಾಡುವವರ ಮನೋಭಾವವನ್ನು ಪ್ರಶ್ನಿಸಿದ ಅವರು, “ಮೊಸರಿನಲ್ಲಿ ಕಲ್ಲು ಹುಡುಕಲು ಹೋದರೆ ಎಲ್ಲದರಲ್ಲೂ ಕಲ್ಲು ಸಿಗುತ್ತದೆ. ಸಲಹೆ ಕೊಡಿ, ಟೀಕೆ ಮಾಡಿ — ಅದರಲ್ಲಿ ತೊಂದರೆಯಿಲ್ಲ. ಆದರೆ ಕೆಲವರಿಗೆ ಟೀಕೆ ಮಾಡುವುದೇ ಉದ್ಯೋಗವಾಗಿದೆ. ಸಮಾಜ ಒಡೆದು ಎಲ್ಲಿಗೆ ಕರೆದೊಯ್ಯಲು ಯತ್ನಿಸುತ್ತೀರಾ? ಕೊನೆಗೆ ಮನೆಯನ್ನೇ ಒಡೆಯುತ್ತೀರಾ? ನಾವು ಕೂಡಿ ಬದುಕಬೇಕಾ, ಹೊಡೆದಾಡಿಕೊಂಡು ಕಾಲ ಕಳೆಯಬೇಕಾ?” ಎಂದು ಪ್ರಶ್ನಿಸಿದರು.










