ನವದೆಹಲಿ: ಹಾಸನ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ಅನುಮೋದನೆ ಕೋರಿ ರೈಲ್ವೆ‌ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಸಂಸದ ಶ್ರೇಯಸ್ ಪಟೇಲ್

ನವದೆಹಲಿ/ಹಾಸನ, ಡಿಸೆಂಬರ್ 8: ಹಾಸನ ಲೋಕಸಭಾ ಕ್ಷೇತ್ರದ ರೈಲ್ವೆ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಮಂಗಳವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಪ್ರಮುಖ ಯೋಜನೆಗಳ ಕುರಿತು ಚರ್ಚಿಸಿದರು.

ಕ್ಷೇತ್ರದಲ್ಲಿ ಜನಸಾಮಾನ್ಯರ ಸಂಚಾರ ಸುಗಮಗೊಳಿಸುವ ನಾಲ್ಕು ಪ್ರಮುಖ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದಿರುವ ಬಗ್ಗೆ ಸಂಸದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಮುಖ ಬೇಡಿಕೆಗಳು ಹೀಗಿವೆ:

1. ನಾನ್-ಇಂಟರ್‌ಲಾಕ್ಡ್ ಗೇಟ್‌ಗಳ ಅಪಾಯ ನಿವಾರಣೆ
ಹೊಳೆನರಸೀಪುರ–ಅರಸೀಕೆರೆ ರೈಲ್ವೆ ವಿಭಾಗದಲ್ಲಿ ಸುಮಾರು 20 ನಾನ್-ಇಂಟರ್‌ಲಾಕ್ಡ್ ಗೇಟ್‌ಗಳು ಇರುವುದರಿಂದ ಪ್ರತಿದಿನ ಸಾರ್ವಜನಿಕರಿಗೆ ಟ್ರಾಫಿಕ್ ತೊಂದರೆ ಉಂಟಾಗುತ್ತಿದೆ. ಅಪಘಾತದ ಅಪಾಯವೂ ಹೆಚ್ಚಿರುವುದರಿಂದ ಎಲ್ಲಾ ನಾನ್-ಇಂಟರ್‌ಲಾಕ್ಡ್ ಎಲ್‌ಸಿ ಗೇಟ್‌ಗಳನ್ನು ತಕ್ಷಣ ಇಂಟರ್‌ಲಾಕ್ ಮಾಡಲು ಸಂಸದರು ಒತ್ತಾಯಿಸಿದ್ದಾರೆ.

2. ಹೆಚ್ಚುವರಿ ROB ಮತ್ತು RUB ನಿರ್ಮಾಣ – ನಿಲ್ದಾಣ ವಿಸ್ತರಣೆಗೆ ಮನವಿ
ಹೊಳೆನರಸೀಪುರ–ಅರಸೀಕೆರೆ ನಡುವಿನ ಮಾರ್ಗದಲ್ಲಿ ಹೆಚ್ಚುವರಿ ರಸ್ತೆ ಮೇಲ್ಸೇತುವೆಗಳು (ROBs) ಹಾಗೂ ರಸ್ತೆ ಅಡಿಸೇತುವೆಗಳು (RUBs) ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಪಟೇಲ್ ತಿಳಿಸಿದ್ದಾರೆ. ಜೊತೆಗೆ ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ಹೊಳೆನರಸೀಪುರ ರೈಲು ನಿಲ್ದಾಣದ ಲೈನ್‌ಗಳನ್ನು 2ರಿಂದ 4ಕ್ಕೆ ಮತ್ತು ಪ್ಲಾಟ್‌ಫಾರ್ಮ್‌ನ್ನು 3ಕ್ಕೆ ವಿಸ್ತರಿಸಲು ಮನವಿ ಮಾಡಿದ್ದಾರೆ.

3. ಅರಸೀಕೆರೆ ಜಂಕ್ಷನ್‌ನಲ್ಲಿ ಸ್ಟಾಫ್ ಕ್ವಾರ್ಟರ್ಸ್ ಕೊರತೆ
ಅರಸೀಕೆರೆ ಜಂಕ್ಷನ್‌ನಲ್ಲಿ 700ಕ್ಕೂ ಹೆಚ್ಚು ರೈಲು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ ಕೇವಲ 230 ಕ್ವಾರ್ಟರ್ಸ್ ಮಾತ್ರ ಲಭ್ಯ. ಕಳೆದ ಐದು ವರ್ಷಗಳಲ್ಲಿ 150 ಹಳೆಯ ಕ್ವಾರ್ಟರ್ಸ್ ತೆರವುಗೊಳಿಸಿದರೂ ಹೊಸದಾಗಿ ಕೇವಲ 30 ಮನೆಗಳು ನಿರ್ಮಾಣವಾಗಿರುವುದನ್ನು ಸಂಸದರು ಉಲ್ಲೇಖಿಸಿ, ಬೇಡಿಕೆಗೆ ಅನುಗುಣವಾಗಿ ಕನಿಷ್ಠ 75 ಹೊಸ ಸ್ಟಾಫ್ ಕ್ವಾರ್ಟರ್ಸ್ ನಿರ್ಮಿಸುವ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.

4. ಕಡೂರು–ಬಿರೂರು ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ
ಕಡೂರು ಹಾಗೂ ಬಿರೂರು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಶೆಲ್ಟರ್, ಕುಡಿಯುವ ನೀರು, ಆಸನ ಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆ, ಈ ಸೌಲಭ್ಯಗಳನ್ನು ತಕ್ಷಣ ಒದಗಿಸಲು ಸಂಸದರು ಮನವಿ ಮಾಡಿದ್ದಾರೆ.

ಹಾಸನ ಕ್ಷೇತ್ರದ ರೈಲ್ವೆ ಯೋಜನೆಗಳು ಶೀಘ್ರ ಜಾರಿಗೆ ಬಂದು ಸಾರ್ವಜನಿಕರಿಗೆ ಸುಗಮ ಸಂಚಾರ ಸಾಧ್ಯವಾಗುವಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

With an aim to accelerate the railway development of Hassan Lok Sabha constituency, MP Shreyas M. Patel met Union Railway Minister Ashwini Vaishnav in New Delhi on Tuesday and discussed important projects.