ಹಾಸನ, ಆಗಸ್ಟ್ 22, 2025: ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು, ತಮ್ಮ ವಿರುದ್ಧ ಸಲ್ಲಿಕೆಯಾದ ಅಪೂರ್ಣ ಆಸ್ತಿ ವಿವರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಒತ್ತಿಹೇಳಿದ್ದಾರೆ.
ಸಂಸದ ಶ್ರೇಯಸ್ ಪಟೇಲ್ ಅವರ ಹೇಳಿಕೆ:
“ನಾನು ಅಭಿವೃದ್ಧಿಯ ಪರ, ಜನರ ಪರವಾಗಿದ್ದೇನೆ. ಪ್ರತಿ ಮೂರು ದಿನಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಪ್ರಚಾರ ಮಾಡಿಕೊಳ್ಳುವುದಿಲ್ಲ. 18-7-2024ರಂದು ಹೈಕೋರ್ಟ್ನಲ್ಲಿ ಈ ಪ್ರಕರಣ ದಾಖಲಾಗಿತ್ತು, ಆದರೆ ಅದನ್ನು ವಜಾಗೊಳಿಸಲಾಗಿದೆ. ಆಗ ನಾನು ‘ಗೆದ್ದೆ, ಗೆದ್ದೆ’ ಎಂದು ಪ್ರಚಾರ ಮಾಡಿಕೊಳ್ಳಬಹುದಿತ್ತು, ಆದರೆ ಮಾಡಿಲ್ಲ. ಈಗ ಅವರು ಸುಪ್ರೀಂ ಕೋರ್ಟ್ಗೆ ಅಪೀಲ್ ಸಲ್ಲಿಸಿದ್ದಾರೆ, ಅಷ್ಟೇ,” ಎಂದು ಶ್ರೇಯಸ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ವಕೀಲರ ವಿರುದ್ಧ ಆಕ್ಷೇಪ:
ವಕೀಲರ ಕ್ರಮವನ್ನು ಖಂಡಿಸಿರುವ ಸಂಸದರು, “ನನ್ನ ಕಚೇರಿಗೆ ಯಾವುದೇ ನೋಟಿಸ್ ಬಂದಿಲ್ಲ. ಕೋರ್ಟ್ ಸಿಬ್ಬಂದಿ ಅಥವಾ ಅಮೀನರು ಬಂದು ನೋಟಿಸ್ ನೀಡಬೇಕು. ಆದರೆ, ಏನೋ ಕ್ರಿಯೇಟ್ ಮಾಡಿ ಮಾಧ್ಯಮದಲ್ಲಿ ಬರಬೇಕು ಎಂದು ಇಂತಹ ಕೃತ್ಯ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ. ವಕೀಲರಿಗೆ ತಮ್ಮ ವೃತ್ತಿಯ ಬಗ್ಗೆ ಸರಿಯಾದ ಮಾಹಿತಿ ಇರಬೇಕು, ಆದರೆ ಅವರಿಗೆ ಇದರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಎನಿಸುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನಿಗೆ ಶರಣು:
“ನಾವೆಲ್ಲರೂ ಕಾನೂನಿಗೆ ತಲೆಬಾಗಬೇಕು. ಹೈಕೋರ್ಟ್ನಲ್ಲಿ ಈ ಪ್ರಕರಣಕ್ಕೆ ಹುರುಳಿಲ್ಲ ಎಂದು ವಜಾಗೊಳಿಸಲಾಗಿದೆ. ಈಗ ಸುಪ್ರೀಂ ಕೋರ್ಟ್ಗೆ ಅಪೀಲ್ ಮಾಡಿದ್ದಾರೆ. ಕಾನೂನಾತ್ಮಕವಾಗಿ ಹೋದರೆ ನನಗೂ ನೂರೆಂಟು ದಾರಿಗಳಿವೆ. ಆದರೆ, ನಾನು ಕಾನೂನಿಗೆ ಶರಣಾಗುವ ಕೆಲಸ ಮಾಡುತ್ತೇನೆ. ತಪ್ಪು ಮಾಡಿದವರನ್ನು ಹೈಕೋರ್ಟ್ ನೋಡಿಕೊಳ್ಳುತ್ತದೆ,” ಎಂದು ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.
ಅಭಿವೃದ್ಧಿಗೆ ಒತ್ತು:
ತಮ್ಮ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಸಂಸದರು, “ಜನರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ಅಭಿವೃದ್ಧಿಯೇ ನನಗೆ ಮುಖ್ಯ. ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡುವುದು ಸರಿಯಲ್ಲ. ನಾವು ವಕೀಲರನ್ನು ಇಡುತ್ತೇವೆ, ಕಾನೂನಿನ ಮೂಲಕ ಎಲ್ಲವನ್ನೂ ಎದುರಿಸುತ್ತೇವೆ,” ಎಂದು ಒತ್ತಿಹೇಳಿದ್ದಾರೆ.










