ಹಾಸನ: ಕೆ.ಎಂ. ಶಿವಲಿಂಗೇಗೌಡ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ: ನಮ್ಮಲ್ಲಿ ಉಂಡು-ತಿಂದು, ಹೆತ್ತ ತಾಯಿಗೆ ದ್ರೋಹ ಮಾಡಿ ಹೋದರು.

ಹಾಸನ: ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಅವರು ಹೆತ್ತ ತಾಯಿಗೆ ದ್ರೋಹ ಮಾಡಿ ಹೋದವರು ಎಂದು ಮೂದಲಿಸಿದರು.

ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮಲ್ಲೇ ಉಂಡು ತಿಂದು ಟಿಕೆಟ್ ಪಡೆದು ಸ್ಪರ್ಧಿಸಿ ನಮ್ಮ ಕಾರ್ಯಕರ್ತರ ಶ್ರಮದಿಂದ ಆಯ್ಕೆಯಾದವರು ದ್ರೋಹ ಮಾಡಿ ಹೋದರು ಎಂದು ಶಿವಲಿಂಗೇಗೌಡರ ಹೆಸರು ಹೇಳದೇ ಕಿಡಿ ಕಾರಿದರು.

ನಮ್ಮ ಕುಟುಂಬವನ್ನು ಹಾಸನ ಜಿಲ್ಲೆಯಿಂದ ಓಡಿಸುತ್ತೇವೆ ಎಂದು ಸಮಾವೇಶ ಮಾಡಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇಷ್ಟೆಲ್ಲಾ ಮಾತನಾಡಲು ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಎಷ್ಟು ಜನ ಶಾಸಕರು ಆಯ್ಕೆಯಾಗಿದ್ದಾರೆ ಎಂದು ನೋಡಬೇಕಾಗುತ್ತದೆ.

ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಶಾಸಕ ಕೂಡ ನಮ್ಮಲ್ಲೇ ಉಂಡು ತಿಂದು ಹೋದವರು ಎಂದು ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಬೆಂಗಳೂರಿನವರು, ತುಮಕೂರಿನವರು ಬೇಕೇ? ಇಲ್ಲಿ ನಿಮ್ಮ ಪಕ್ಷದಿಂದ ಆಯ್ಕೆಯಾಗಿರುವವರನ್ನು ಮಂತ್ರಿ ಮಾಡುತ್ತಿರೋ ನೀರಿಗೆ ಹಾಕುತ್ತಿರೋ ಅದು ನಿಮಗೆ ಬಿಟ್ಟ ವಿಷಯ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.