ಹಾಸನ:ನೋವಿನಲ್ಲಿರುವ ಕಾಂಗ್ರೆಸ್‌ ಶಾಸಕರಿಗೆ ಜೆಡಿಎಸ್‌ ಬಾಗಿಲು ಮುಕ್ತ: ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಆಹ್ವಾನ

ಹಾಸನ: ‘ಸಂಪುಟ ವಿಸ್ತರಣೆ ವೇಳೆ ಮಂತ್ರಿಸ್ಥಾನ ಸಿಗದೆ ಅಸಮಾಧಾನಗೊಂಡು, ನೋವಿನಲ್ಲಿರುವ ಕಾಂಗ್ರೆಸ್‌ ಶಾಸಕರಿಗೆ ಜೆಡಿಎಸ್‌ ಬಾಗಿಲು ಸದಾ ಮುಕ್ತವಾಗಿದೆ. ಅಂಥವರು ನಮ್ಮ ಪಕ್ಷಕ್ಕೆ ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಸಮಾಧಾನಿತ ಶಾಸಕರಿಗೆ ಬಹಿರಂಗ ಆಹ್ವಾನ ನೀಡಿದರು.

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಗೆ ಶನಿವಾರ ಸಂಜೆ ಭೇಟಿ ನೀಡಿ, ತಾಯಿಯ ಸಮಾಧಿ ದರ್ಶನ ಪಡೆದ ಬಳಿಕ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಂತ್ರಿಸ್ಥಾನದ ಭರವಸೆ ಹುಸಿಯಾಗಿ ಬಹಳಷ್ಟು ಶಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನೋವಿನಲ್ಲಿರುವವರಿಗೆ, ಸಮಸ್ಯೆಯಲ್ಲಿ ಇರುವವರಿಗೆ ಸಾಂತ್ವನ ಹೇಳಿ ಪರಿಹಾರ ನೀಡುವ ಪಕ್ಷ ಜೆಡಿಎಸ್‌. ಅಸಮಾಧಾನಿತರು ನಮ್ಮತ್ತ ಬಂದರೆ ಅವರ ನೋವು ಶಮನವಾಗುವುದಲ್ಲದೆ, ಭವಿಷ್ಯದಲ್ಲಿ ಉತ್ತಮ ಜನಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಶಕ್ತಿ ಬೆಳೆಯಲಿದೆ. ಕಾಲವೇ ಎಲ್ಲವನ್ನೂ ನಿರ್ಧಾರ ಮಾಡಲಿದ್ದು, ಚುನಾವಣೆ ಹೊಸ್ತಿಲಲ್ಲಿ ಅನಿವಾರ್ಯವಾಗಿ ಅವರು ಆ ಪಕ್ಷ ತೊರೆಯುವುದು ದೂರವಿಲ್ಲ’ ಎಂದು ಭವಿಷ್ಯ ನುಡಿದರು.

ಜೆಡಿಎಸ್‌ ಮುಗಿಸುವುದು ಹಗಲುಗನಸು: ‘ಹಳೇ ಮೈಸೂರು ಭಾಗವನ್ನು ಗುರಿಯಾಗಿಸಿಕೊಂಡು ಕೆಲವರಿಗೆ ಮಂತ್ರಿಸ್ಥಾನ ನೀಡಿದ ತಕ್ಷಣ ಜೆಡಿಎಸ್‌ಗೆ ದೊಡ್ಡ ನಷ್ಟವಾಗಲಿದೆ ಎಂದು ನಾನು ಭಾವಿಸಿಲ್ಲ. ನಮ್ಮಿಂದ ದೂರ ಹೋದವರು ಜೆಡಿಎಸ್‌ ಮುಗಿಸುತ್ತೇವೆ ಎನ್ನುವುದು ಕೇವಲ ಕನಸಿನ ಮಾತು. ಆರ್ಥಿಕವಾಗಿ ಪಕ್ಷದ ಖಜಾನೆ ತುಂಬಿಲ್ಲದಿರಬಹುದು, ಆದರೆ ಸಣ್ಣ ಶಕ್ತಿಯನ್ನು ಉಳಿಸಿ, ಬೆಳೆಸುವ ನಾಡಿನ ಜನತೆಯೇ ನಮ್ಮ ಬೆನ್ನೆಲುಬು. ಈಗಿರುವ ರಾಜ್ಯ ಸರ್ಕಾರವು ಕಾಂಗ್ರೆಸ್ ಕ್ಯಾಬಿನೆಟ್ ಅಲ್ಲ, ಅದೊಂದು ರೀತಿಯ ಸಮ್ಮಿಶ್ರ ಸರ್ಕಾರವಿದ್ದಂತೆ’ ಎಂದು ಅವರು ಲೇವಡಿ ಮಾಡಿದರು.

ಹೊರಟ್ಟಿ ರಾಜೀನಾಮೆಗೆ ಬ್ಲಾಕ್‌ಮೇಲ್‌ ತಂತ್ರ: ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಹೊರಟ್ಟಿ ಅವರ ಮೇಲೆ ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ೮-೧೦ ಶಾಸಕರು ಒತ್ತಡ ಹೇರಿ, ಬ್ಲಾಕ್‌ಮೇಲ್‌ ತಂತ್ರ ಬಳಸಿ ರಾಜೀನಾಮೆ ಪಡೆದಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲೇ ಟೈಪ್‌ ಮಾಡಲಾಗಿದ್ದ ರಾಜೀನಾಮೆ ಪತ್ರದಲ್ಲಿ ದಿನಾಂಕದ ಜಾಗ ಬಿಟ್ಟು, ಪೆನ್ಸಿಲ್‌ನಲ್ಲಿ ‘7’ ಎಂದು ತಿದ್ದಿ ಬರೆಯಲಾಗಿದೆ. ಇದನ್ನು ಗಮನಿಸಿದರೆ, ಮೊದಲೇ ಎಲ್ಲವನ್ನು ಸಿದ್ಧಪಡಿಸಿಕೊಂಡು ಕರೆಸಿ ರಾಜೀನಾಮೆ ಪಡೆದಿರುವುದು ಎದ್ದು ಕಾಣುತ್ತದೆ’ ಎಂದು ಆರೋಪಿಸಿದರು.

ಬ್ರೈನ್‌ ವಾಷ್‌ ಮಾಡಿದರು: ಶಾಸಕ ಗುಬ್ಬಿ ಶ್ರೀನಿವಾಸ್ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ‘ನಾನು ಕರೆದು ಮಂತ್ರಿ ಮಾಡಿದೆ ಎಂಬ ಅವರ ಮಾತಿನಲ್ಲಿ ಸತ್ಯವಿದೆ. ನನ್ನೊಂದಿಗೆ ಅತ್ಯಂತ ವಿಶ್ವಾಸ ಹಾಗೂ ಆತ್ಮೀಯತೆಯಲ್ಲಿದ್ದ ಅವರನ್ನು, ೨೦೧೩ರ ನಂತರ ನನ್ನಿಂದಲೇ ಬೆಳೆದ ಕೆಲವರು ‘ಬ್ರೈನ್‌ ವಾಷ್‌’ ಮಾಡಿದರು. ನನ್ನ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ, ಅವರ ಮನಸ್ಸು ಹಾಳುಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನಿಂದ ಪಾದಯಾತ್ರೆ: ‘ಶ್ವೇಚ್ಛಾಚಾರವಾಗಿ ಬಿಡದಿ ಟೌನ್‌ಶಿಪ್‌ ನಿರ್ಮಾಣ ನಿರ್ಧಾರ ಕೈಗೊಂಡಿರುವ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಲು ಭಾನುವಾರದಿಂದ ಮೂರು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೈರಮಂಗಲದ ನೈಸ್ ರಸ್ತೆಯಿಂದ ಆರಂಭವಾಗುವ ಈ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಒಲಿದಿರುವುದಕ್ಕೆ ಪ್ರತಿಕ್ರಿಯಿಸಿ, ‘ಹಾಸನಕ್ಕೆ ಒಂದು ಮಂತ್ರಿ ಸ್ಥಾನ ಸಿಕ್ಕಿದೆ, ಅವರು ಒಳ್ಳೆಯ ಕೆಲಸ ಮಾಡಲಿ, ನಾವೇಕೆ ಅಸೂಯೆ ಪಡೋಣ’ ಎಂದರು.

ತಾಯಿಯನ್ನು ನೆನೆದು ಭಾವುಕ: ಸುದ್ದಿಗೋಷ್ಠಿಗೂ ಮುನ್ನ ತಾಯಿಯನ್ನು ನೆನೆದು ಭಾವುಕರಾದ ಕೇಂದ್ರ ಸಚಿವರು, ‘ಇನ್ಮುಂದೆ ನಮ್ಮ ತಾಯಿಯನ್ನು ಜೀವಂತವಾಗಿ ನೋಡಲಾಗದು. ಈ ಪುಣ್ಯಭೂಮಿಯಲ್ಲಿ ಅವರ ಕಾರ್ಯ ಮಾಡಿದ್ದೇನೆ. ಅವರು ಸದಾ ನಮ್ಮ ಮುಂದಿದ್ದಾರೆ ಎಂದು ಪ್ರತಿನಿತ್ಯ ನೆನಪಿಸಿಕೊಳ್ಳುತ್ತೇವೆ’ ಎಂದು ಕಣ್ಣೀರಾದರು.