ಹಾಸನ : ಗೊರೂರು ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರಮಟ್ಟದ ನ್ಯಾಷನಲ್ ಕ್ವಾಲಿಟಿ ಅಸ್ಸುರೇನ್ಸ್ ಸ್ಟಾಂಡರ್ಡ್ (NQAS) ಪ್ರಮಾಣಪತ್ರವನ್ನು ಪಡೆದುಕೊಂಡು ಹಾಸನ ಜಿಲ್ಲೆಗೆ ಗೌರವ ತಂದಿದೆ. ಡಾ. ತೇಜಸ್ವಿ ಅವರ ಮಾರ್ಗದರ್ಶನದಲ್ಲಿ ಈ ಮಹತ್ವದ ಸಾಧನೆ ಸಾಧ್ಯವಾಗಿದ್ದು, ರಾಜ್ಯದ ಅತಿ ಕೆಲವು ಕೇಂದ್ರಗಳಷ್ಟೇ ಈ ಪ್ರಮಾಣಪತ್ರ ಪಡೆಯಲು ಯಶಸ್ವಿಯಾಗಿವೆ.
ಕಳೆದ ತಿಂಗಳಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಬಂದ ರಾಷ್ಟ್ರೀಯ ಗುಣಮಟ್ಟ ಮೌಲ್ಯಮಾಪನ ತಂಡವು ಎರಡು ದಿನಗಳ ಕಾಲ ಕೇಂದ್ರದ ವಿವಿಧ ವಿಭಾಗಗಳನ್ನು ಪರಿಶೀಲಿಸಿತ್ತು. ಅತ್ಯಂತ ಕ್ಲಿಷ್ಟಕರವಾದ ಈ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಗೊರೂರು ಪಿಎಚ್‌ಸಿಗೆ ಪ್ರಮಾಣಪತ್ರ ನೀಡಲಾಗಿದೆ.
ಡಾ. ತೇಜಸ್ವಿ ಹಾಗೂ ಅವರ ಸಿಬ್ಬಂದಿ ವರ್ಗದವರ ಶ್ರಮ, ಜನಸ್ನೇಹಿ ಸೇವಾ ಮನೋಭಾವ ಮತ್ತು ಪರಿಸರ ಸ್ನೇಹಿ ಪ್ರಯತ್ನಗಳು ಈ ಸಾಧನೆಯ ಹಿನ್ನಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಆರು ತಿಂಗಳ ಹಿಂದೆ ಕಾರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರವು ಸಹ ಇದೇ ರೀತಿಯ ರಾಷ್ಟ್ರೀಯ ಪ್ರಮಾಣಪತ್ರ ಪಡೆದಿತ್ತು. ಹೀಗಾಗಿ ಎರಡು ಪಿಎಚ್‌ಸಿಗಳಿಗೆ ರಾಷ್ಟ್ರಮಟ್ಟದ ಮಾನ್ಯತೆ ತಂದುಕೊಟ್ಟಿರುವುದು ಡಾ. ತೇಜಸ್ವಿ ಅವರ ನಾಯಕತ್ವದ ಯಶಸ್ಸಿನ ಚಿಹ್ನೆಯಾಗಿದೆ.
ಹಾಸನ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಡಾ. ತೇಜಸ್ವಿ ಮತ್ತು ಗೊರೂರು ಪಿಎಚ್‌ಸಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.










