11.8 C
Munich
Home Uncategorized ಹಾಸನ: ಆನೆ-ಮಾನವ ಸಂಘರ್ಷಕ್ಕೆ ಶ್ರೀಲಂಕಾ ಮಾದರಿಯ ಶಾಶ್ವತ ಪರಿಹಾರ ಅಗತ್ಯ: ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್

ಹಾಸನ: ಆನೆ-ಮಾನವ ಸಂಘರ್ಷಕ್ಕೆ ಶ್ರೀಲಂಕಾ ಮಾದರಿಯ ಶಾಶ್ವತ ಪರಿಹಾರ ಅಗತ್ಯ: ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್

ಹಾಸನ: ಕರ್ನಾಟಕದ ಪಶ್ಚಿಮ ಘಟ್ಟದಂಚಿನ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಆನೆ-ಮಾನವ ಸಂಘರ್ಷವನ್ನು ಶಾಶ್ವತವಾಗಿ ನಿಯಂತ್ರಿಸಲು ಶ್ರೀಲಂಕಾ ಮಾದರಿಯ ಆನೆಧಾಮ (Elephant Transit Camp) ಸ್ಥಾಪನೆಯೇ ಸೂಕ್ತ ಪರಿಹಾರ ಎಂದು ಮಾಜಿ ಶಾಸಕ ಎಚ್.ವಿ. ವಿಶ್ವನಾಥ್ ತಿಳಿಸಿದರು.

ಹಾಸನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಮತ್ತು ಆನೆ ಇಬ್ಬರೂ ಸಹಜವಾಗಿ ಸಹಬಾಳ್ವೆ ನಡೆಸುವ ಪರಿಸ್ಥಿತಿಯನ್ನು ನಿರ್ಮಿಸುವ ಹೊಣೆಗಾರಿಕೆ ಸರ್ಕಾರದದ್ದಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ರೈತರು, ಕಾರ್ಮಿಕರು ಆನೆ ಹಾವಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ.

ಇನ್ನು ಈ ಸಮಸ್ಯೆಗೆ ರಾಜಕೀಯ ಬಣ್ಣ ನೀಡದೇ, ತಂತ್ರಜ್ಞಾನಾಧಾರಿತ ಮತ್ತು ಮಾನವೀಯ ದೃಷ್ಟಿಕೋನದ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದರು. ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ 6,000ಕ್ಕೂ ಹೆಚ್ಚು ಆನೆಗಳಿವೆ ಎಂದು ತಿಳಿಸಿ, ಕಳೆದ ಎರಡು ದಶಕಗಳಲ್ಲಿ ಅರಣ್ಯದಂಚಿನಿಂದ ಮಲೆನಾಡಿನ ಜನವಸತಿ ಪ್ರದೇಶಗಳವರೆಗೆ ಸಂಘರ್ಷ ವ್ಯಾಪಿಸಿರುವುದನ್ನು ಖಂಡಿಸಿದರು.

ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಜೀವಹಾನಿ ಸಂಭವಿಸಿದೆ. ಕೇವಲ ಹಾಸನ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ 78ಕ್ಕೂ ಹೆಚ್ಚು ಜನರು ಆನೆ ಹಾವಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಿನ ಬಿದಿರು, ಬೆಲ್ಲದ ಹಣ್ಣುಗಳನ್ನು ತಿನ್ನುತ್ತಿದ್ದ ಆನೆಗಳು ಈಗ ಕಬ್ಬು, ತೆಂಗು, ಬಾಳೆ ಮತ್ತು ಹಲಸಿನಂತಹ ಪೌಷ್ಟಿಕ ಬೆಳೆಗಳಿಗೆ ಒಗ್ಗಿಹೋಗಿವೆ. ಈ ಪ್ರದೇಶಗಳಲ್ಲಿ ಸುಮಾರು 300 ಹಳ್ಳಿಗಳ ರೈತರು ಹಾನಿಗೊಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಸ್ತವದಲ್ಲಿ ಈ ಸಮಸ್ಯೆಗೆ ಕಾರಣವಾಗಿರುವುದು ರಾಜ್ಯದ ಎಲ್ಲ ಆನೆಗಳೂ ಅಲ್ಲ. ಕೇವಲ 200 ರಿಂದ 250 ಆನೆಗಳಷ್ಟೇ ಮಾನವ ವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇಂತಹ ಪುಂಡಾಟ ಆಡುವ ಅನಗಳನ್ನು ಗುರುತಿಸಿ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರೆ ಸಮಸ್ಯೆಯು ಬಹುಮಟ್ಟಿಗೆ ಕಡಿಮೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀಲಂಕಾ ಸರ್ಕಾರ ಅನುಷ್ಠಾನಗೊಳಿಸಿರುವ ಯಶಸ್ವಿ ಮಾದರಿಯನ್ನು ಉಲ್ಲೇಖಿಸಿದರು. ಶ್ರೀಲಂಕಾದಲ್ಲಿ ಸ್ಥಾಪಿಸಲಾದ ಪಿನ್ನಾವಲಾ ಎಲಿಫೆಂಟ್ ಅರ್ಥನೇಜ್ ಮತ್ತು ಉಡವಳವೆ ಆನೆ ಟ್ರಾನ್ಸಿಟ್ ಹೋಮ್ ಮಾದರಿಯು ಮಾನವ-ಆನೆ ಸಂಘರ್ಷ ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಅಲ್ಲಿ ಪುಂಡಾಟ ಆಡುವ, ಗಾಯಗೊಂಡ ಅಥವಾ ಜನವಸತಿ ಪ್ರದೇಶಗಳಲ್ಲಿ ಹಾನಿ ಮಾಡುವ ಆನೆಗಳನ್ನು ಹಿಡಿದು ವಿಶೇಷ ಶಿಬಿರಗಳಲ್ಲಿ ಇಡಲಾಗುತ್ತದೆ.

ಈ ಶಿಬಿರಗಳು ಕೇವಲ ಅರಣ್ಯ ಸಂರಕ್ಷಣೆಗಾಗಿ ಮಾತ್ರವಲ್ಲ, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯೂ ಆಗಿವೆ. ದಿನವೂ ನೂರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿದೆ ಹಾಗೂ ಸರ್ಕಾರಕ್ಕೂ ಮಹತ್ತರ ಆದಾಯ ಬಂದಿದೆ ಎಂದು ವಿವರಿಸಿದರು. ಕರ್ನಾಟಕದಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಂಡರೆ ರೈತರ ಕಷ್ಟಕ್ಕೆ ಶಾಶ್ವತ ಪರಿಹಾರ ದೊರತೀಡು ಎಂದು ಹೇಳಿದರು.

ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ರೀತಿಯ ಅನೆದಾಮಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಒಂದು ಕಡೆಯಿಂದ ರೈತರ ಜೀವ ಮತ್ತು ಬೆಳೆ ಉಳಿಸಬಹುದು, ಮತ್ತೊಂದೆಡೆ ಪ್ರವಾಸೋದ್ಯಮದ ಮೂಲಕ ಆದಾಯವನ್ನೂ ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.

ವಿಶ್ವನಾಥ್ ಅವರು ಸರ್ಕಾರಕ್ಕೆ ಸ್ಪಷ್ಟವಾದ ಶಿಫಾರಸು ನೀಡುತ್ತಾ ಮುಖ್ಯಮಂತ್ರಿಗಳು ಮತ್ತು ಅರಣ್ಯಣ್ಯ ಸಚಿವರು ತಕ್ಷಣವೇ ಅಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳ ನಿಯೋಗವನ್ನು ಶ್ರೀಲಂಕಾಕ್ಕೆ ಕಳುಹಿಸಿ ಅಲ್ಲಿ ಅನೆಧಾಮಗಳ ನಿರ್ವಹಣಾ ವಿಧಾನ ಮತ್ತು ಕಾನೂನುಗಳ ಕುರಿತು ಸಮಗ್ರ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.

ಅದರ ಆಧಾರದ ಮೇಲೆ ಕರ್ನಾಟಕದ ಆನೆ ಹಾವಳಿ ಪ್ರದೇಶಗಳಲ್ಲಿ ಅನೆಧಾಮಗಳ ಸ್ಥಾಪನೆ ಮಾಡಬೇಕೆಂದೂ, ಪದೇ ಪದೇ ಮಾನವ ವಸತಿಗೆ ನುಗ್ಗುವ ಆನೆಗಳನ್ನು ಬಂಧಿಸಿ ಇಂತಹ ಶಿಬಿರಗಳಿಗೆ ಸ್ಥಳಾಂತರಿಸಬೇಕೆಂದೂ ಒತ್ತಾಯಿಸಿದರು. ಆನೆಗಳು ತಪ್ಪು ಮಾಡುತ್ತಿಲ್ಲ. ನಾವು ಅವರ ವಾನಸ್ಥಳವನ್ನು ಕಿತ್ತುಕೊಂಡಿದ್ದೇವೆ. ಆದ್ದರಿಂದ ಪರಿಹಾರವೂ ಮಾನವೀಯ ದೃಷ್ಟಿಯಿಂದ ಇರಬೇಕು. ಈ ಸಮಸ್ಯೆಯನ್ನು ರಾಜಕೀಯ ಅಥವಾ ಅಧಿಕಾರದ ಮಟ್ಟದಲ್ಲಿ ಅಲ್ಲ, ಜೀವಹಕ್ಕಿನ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಕುಮಾರ್ ಕೃಷ್ಣಪ್ಪ ಇತರರು ಹಾಜರಿದ್ದರು.

error: Content is protected !!