ಹಾಸನ: ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರ ಹುಟ್ಟುಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಹಾಗೂ ಜನಪರ ಕಾರ್ಯಕ್ರಮ ಮೂಲಕ ಆಚರಿಸಲಾಯಿತು. ನಗರದ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನಾಯಕರು ರಾಜಕೀಯವಾಗಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ದೇವಾಲಯದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಪ್ರೀತಂ ಗೌಡ ಅವರ ತಂದೆ-ತಾಯಿ, ಕುಟುಂಬದ ಸದಸ್ಯರು ಮತ್ತು ಪ್ರಮುಖ ಮುಖಂಡರ ಸಮ್ಮುಖದಲ್ಲಿ ವಿಶೇಷ ಪೂಜೆ ಮತ್ತು ಅಶೀರ್ವಚನಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡವು. ಪೂಜೆ ಬಳಿಕ ಸಿಹಿತಿನಿಸು ವಿತರಣೆ, ಪಟಾಕಿ ಸಿಡಿಸುವ ಮೂಲಕ ಜನ್ಮದಿನೋತ್ಸವಕ್ಕೆ ಭಕ್ತಿಯ ಜೊತೆ ಹರ್ಷದ ಮೆರಗು ಕೂಡ ದೊರೆಯಿತು.
ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ, ಬಿಜೆಪಿ ನಗರಾಧ್ಯಕ್ಷ ಯೋಗೇಶ್ ಗೌಡ ಹಾಗೂ ಮುಖಂಡ ಶ್ರೀಕಾಂತ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರೀತಂ ಗೌಡ ಅವರ ಸೇವಾ ಮನೋಭಾವ, ದೃಢ ನಿಲುವು ಮತ್ತು ಅಭಿವೃದ್ದಿ ದೃಷ್ಟಿಕೋನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವುದು ನಮ್ಮ ಗೌರವ. ಅವರು ರಾಜಕೀಯವಾಗಿ ಮತ್ತಷ್ಟು ಶಕ್ತಿಯುತರಾಗಿ ರಾಜ್ಯ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ಪ್ರೀತಂ ಗೌಡರು ಶಾಸಕ ಸ್ಥಾನದಲ್ಲಿದ್ದಾಗ ಮಾಡಿದ ಕೆಲಸಗಳು ಹಾಸನದ ಅಭಿವೃದ್ಧಿ ವೇಗ ಹೆಚ್ಚಿಸಿದ್ದವು. ೨೦೨೮ರಲ್ಲಿ ಅವರು ಮತ್ತೆ ಸ್ಪರ್ಧಿಸಿ ಶಾಸಕರಾಗಿ ತಾಲೂಕು ಮತ್ತು ನಗರವನ್ನು ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನ್ಮದಿನವನ್ನು ಕೇವಲ ಆಚರಣೆಗಷ್ಟೇ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣಗೊಳಿಸಲಾಯಿತು. ಪೌರಕಾರ್ಮಿಕರು ಮತ್ತು ನಗರದ ವಾಹನ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿ, ಗೌರವ ಸೂಚಿಸಲಾಯಿತು. ಅಲ್ಲದೆ ವಿವಿಧೆಡೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿದ್ದು, ನೂರಾರು ಜನರು ಇದರ ಸದುಪಯೋಗ ಪಡೆದುಕೊಂಡರು. ಬೈಕ್ ರ‍್ಯಾಲಿ ಮೂಲಕ ಬಂದ ಯುವಕರ ತಂಡಗಳು, ಮಹಿಳಾ ಕಾರ್ಯಕರ್ತರು, ಅಭಿಮಾನಿಗಳು ಪ್ರೀತಂ ಗೌಡರ ಕಟೌಟ್‌ಗಳಿಗೆ ಹೂವಿನ ಅಲಂಕಾರ ಮಾಡಿ, ಸಿಹಿ ಹಂಚಿ ತಮ್ಮ ಹರ್ಷ ವ್ಯಕ್ತಪಡಿಸಿದರು.










